ಅಮಿತ್ ಶಾ ಸೆ.22ರಂದು ನವದೆಹಲಿಯಲ್ಲಿ 3ನೇ ರಾಷ್ಟ್ರೀಯ ANTF ಮುಖ್ಯಸ್ಥರ ಸಮ್ಮೇಳನ ಉದ್ಘಾಟನೆ

 

ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ

 

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 22ರಂದು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ವಸ್ತು ವಿರೋಧಿ ಕಾರ್ಯಪಡೆಗಳ (ANTF) ಮುಖ್ಯಸ್ಥರ 3ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಈ ಸಮ್ಮೇಳನವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಆಯೋಜಿಸುತ್ತಿದ್ದು, 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ANTF ಮುಖ್ಯಸ್ಥರು ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

 

ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಟಿವಿ ಜಾಹೀರಾತುಗಳನ್ನು (TVCs) ಅಮಿತ್ ಶಾ ಬಿಡುಗಡೆ ಮಾಡಲಿದ್ದು, ಲಖನೌ ಮತ್ತು ಡೆಹ್ರಾಡೂನ್‌ನಲ್ಲಿನ NCB ವಲಯ ಕಚೇರಿಗಳ ನೂತನ ಸಂಕೀರ್ಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉತ್ತಮ ಕಾರ್ಯನಿರ್ವಹಣೆ ತೋರಿದ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ANTFಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪರಿಷ್ಕೃತ NCB ವೆಬ್‌ಸೈಟ್ ಕೂಡ ಆರಂಭಗೊಳ್ಳಲಿದೆ.

 

“United Resolve, Shared Responsibility” ಎಂಬ ಆಶಯದಡಿ ನಡೆಯಲಿರುವ ಸಮ್ಮೇಳನದಲ್ಲಿ Vision Document on Narcotics Control (2026-29) ನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ANTFಗಳಿಗೆ ನಿಗದಿಪಡಿಸಿರುವ ಗುರಿಗಳ ಪ್ರಗತಿ ಕುರಿತು ಚರ್ಚಿಸಲಾಗುತ್ತದೆ. ಮಾದಕ ವಸ್ತುಗಳ ಅಕ್ರಮ ಸಾಗಾಟ ಮತ್ತು ದುರ್ಬಳಕೆಯನ್ನು ತಡೆಯಲು ಕೈಗೊಳ್ಳುತ್ತಿರುವ ಕ್ರಮಗಳು, ಪೂರೈಕೆ ಕಡಿತ, ಬೇಡಿಕೆ ಕಡಿತ ಹಾಗೂ ಹಾನಿ ತಗ್ಗಿಸುವ ಕಾರ್ಯತಂತ್ರಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ.