ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ 

ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 11 ದಿನಗಳಿಂದ ಧರಣಿಯನ್ನು ಮಾಡುತ್ತಿದ್ದಾರೆ. ಅತ್ಯಂತ ಕನಿಷ್ಠ ಸಂಭವನೆ ಪಡೆಯುತ್ತಿರುವ ಆಶಾ ಕಾರ್ಯಕರ್ತೆಯರು 11 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ನಿರ್ಲಿಪ್ತವಾಗಿ ಕುಳಿತು ಕೊಂಡಿರುವುದು ಎಂಬುದು ನೋವಿನ ಸಂಗತಿ ಆಗಿರುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ. 

ಆರೋಗ್ಯ ಸಚಿವ ಯು.ಟಿ ಖಾದರ್ ರವರು ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ನಮ್ಮ ಇಲಾಖೆ ನಡೆಯುತ್ತದೆ ಅಂತ ಹೇಳುತ್ತಾರೆ. ಮಂತ್ರಿಗಳು ಇಲ್ಲದಿದ್ದರೂ ಸರಕಾರ ಇರುವುದಿಲ್ಲವಾ, ಮುಖ್ಯಮಂತ್ರಿಗಳು ಇಲ್ಲದಿದ್ದರೂ ರಾಜ್ಯಪಾಲರು ಇರುವುದಿಲ್ಲವಾ, ಮತ್ತೆ ನೀವು ಏಕೆ ಇದ್ದೀರಿ ಎಂದು ಆಶಾ ಕಾರ್ಯಕರ್ತೆಯರು ತಿರುಗಿ ಪ್ರಶ್ನೆಯನ್ನು ಕೇಳಿದರೆ ಯಾರು ಉತ್ತರ ಕೊಡಬೇಕಾಗುತ್ತದೆ, ಎಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ತಿಳಿಸಿದರು. 

ಆರೋಗ್ಯ ಸಚಿವರು ಇಷ್ಟು ಬೇಜವಾಬ್ದಾರಿತನದಿಂದ ಮಾತನಾಡುವುದು ಖಂಡನೀಯವಾಗಿದೆ. ಆಶಾ ಕಾರ್ಯಕರ್ತೆಯರನ್ನು ಮುಖ್ಯಮಂತ್ರಿಗಳು ಕರೆದು ಮಾತನಾಡಿಸಬೇಕು. ಅವರದ್ದು ಅತ್ಯಂತ ಕನಿಷ್ಠ ಬೇಡಿಕೆ ಆಗಿರುತ್ತದೆ. ರೂ. 15000 ಗಳನ್ನು ಕೊಡಿ, ವೈದ್ಯಕೀಯ ವೆಚ್ಚಕ್ಕೆ ನೆರವುಗಳನ್ನು ಕೊಡಿ, ನಿವೃತ್ತಿಯಾದರೆ 5 ಲಕ್ಷ ರೂ ಏಕಕಾಲಕ್ಕೆ ಸಿಗುವಂತೆ ಮಾಡಿ, ಎಂಬ ಸಾಮಾನ್ಯ ಬೇಡಿಕೆಯನ್ನು ಈಡೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡುತ್ತೇನೆ. ರಾಜ್ಯ ಸರ್ಕಾರದವರು ಮಾತನಾಡುವಾಗ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಕೇಂದ್ರ ಸರ್ಕಾರದ ವತಿಯಿಂದ ನಮ್ಮ ಕೈಯಲ್ಲಾದ ಪ್ರಯತ್ನವನ್ನು ಮಾಡುತ್ತೇವೆ. ಆಶಾ ಕಾರ್ಯಕರ್ತೆಯರು ಕೆಲಸ ಮಾಡುವುದು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಆಗಿರುತ್ತದೆ, ಎಂದು ಹೇಳಿದರು.