ಇಂದ್ರಾಣಿ ನದಿಯಲ್ಲಿ ಮಾಲಿನ್ಯದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದ ಅಧ್ಯಯನ 

ಪ್ರಕಾಶ್ ಸಾಮಗ 

ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ 

ಉಡುಪಿ ನಗರದಲ್ಲಿ ಹರಿಯುವ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ ಸುರಿಯುವುದು, ಸಂಸ್ಕರಿಸದ ಒಳಚರಂಡಿ ನೀರು ನದಿಗೆ ಸೇರುವುದರಿOದ ಉಂಟಾಗಿರುವ ಬದಲಾವಣೆಗಳಿಂದ ಮಾಲಿನ್ಯ ಹಾಗೂ ಪ್ರವಾಹದ ಅಪಾಯ ಹೆಚ್ಚುತ್ತಿದೆ ಎಂದು ಸ್ಪ್ರಿಂಗರ್ ನೇಚರ್ ಪ್ರಕಟಿಸಿರುವ ಸಂಶೋಧನಾ ಅಧ್ಯಯನವೊಂದು ಎಚ್ಚರಿಸಿದೆ. ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಮಣಿಪಾಲದ ಸಂಶೋಧಕರು ನಡೆಸಿರುವ ಈ ಅಧ್ಯಯನವನ್ನು Scientific Reports ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಮಣ್ಣಪಳ್ಳ ಕೆರೆಯಿಂದ ಮಲ್ಪೆವರೆಗೆ ಸುಮಾರು 14 ಕಿ.ಮೀ. ಉದ್ದದ ನದಿಪಾತ್ರದಲ್ಲಿ 15 ಸ್ಥಳಗಳಲ್ಲಿ ನೀರಿನ ಗುಣಮಟ್ಟವನ್ನು ಅಧ್ಯಯನ ಮಾಡಲಾಗಿದೆ. 

ಅಧ್ಯಯನದ ಪ್ರಕಾರ, ನದಿಯ ಸುಮಾರು ಶೇ.40ರಷ್ಟು ಭಾಗದಲ್ಲಿ ನದಿಯ ಆರೋಗ್ಯದ ಪ್ರಮುಖ ಸೂಚಕವಾಗಿರುವ ಕರಗಿದ ಆಮ್ಲಜನಕ (DO) ಪ್ರಮಾಣ ಸುರಕ್ಷಿತ ಮಿತಿಗಿಂತ ಕಡಿಮೆಯಾಗಿದೆ. ನೀರಿನ ಗುಣಮಟ್ಟದ ಮಾನದಂಡದ ಪ್ರಕಾರ DO ಪ್ರಮಾಣ 5 mg/L ಅಥವಾ ಅದಕ್ಕಿಂತ ಹೆಚ್ಚಿರಬೇಕು. ಕೊಡವೂರಿನಲ್ಲಿ ಅತ್ಯಂತ ಕಡಿಮೆ 0.16 mg/L DO ದಾಖಲಾಗಿದ್ದು, ಇಲ್ಲಿ ನೀರು ನಿಂತಿರುವುದು ಹಾಗೂ ಸಂಸ್ಕರಿಸದ ಒಳಚರಂಡಿ ನೀರು ಸೇರುತ್ತಿರುವುದು ಕಂಡುಬಂದಿದೆ. ಮಠದಬೆಟ್ಟುವಿನಲ್ಲಿ 0.89 mg/L DO ದಾಖಲಾಗಿದ್ದು, ಸಮೀಪದ ಒಳಚರಂಡಿ ಸಂಸ್ಕರಣಾ ಘಟಕದಿಂದ ಸಮರ್ಪಕವಾಗಿ ಸಂಸ್ಕರಿಸದ ನೀರು ಹರಿದುಬರುತ್ತಿರುವುದು ಇದಕ್ಕೆ ಕಾರಣ ಎಂದು ಸಂಶೋಧಕರು ಗುರುತಿಸಿದ್ದಾರೆ. 

ನದಿಯ ಕೆಳಭಾಗದಲ್ಲಿ ವಿದ್ಯುತ್ ವಾಹಕತೆ (EC) ಹಾಗೂ ಲವಣಾಂಶ ಹೆಚ್ಚಾಗಿರುವುದು ಒಳಚರಂಡಿ ನೀರಿನ ಸೇರ್ಪಡೆ, ಅಜೈವಿಕ ತ್ಯಾಜ್ಯ ಸಂಗ್ರಹ ಹಾಗೂ ನದಿಯ ಮುಖಭಾಗದಲ್ಲಿ ಸಮುದ್ರದ ನೀರು ಒಳನುಗ್ಗುತ್ತಿರುವುದನ್ನು ಸೂಚಿಸುತ್ತದೆ. pH ಮತ್ತು ಲವಣಾಂಶ ಬಹುತೇಕ ಮಿತಿಯೊಳಗಿದ್ದರೆ, ಒಟ್ಟು ಕರಗಿದ ಘನಪದಾರ್ಥಗಳ (TDS) ಪ್ರಮಾಣ ಮಲ್ಪೆಯಲ್ಲಿ 17,290 mg/Lಗೆ ಏರಿಕೆಯಾಗಿದ್ದು, ಇರಬೇಕಾದ ಮಿತಿ 500 mg/L ಯನ್ನು ಬಹಳಷ್ಟು ಪ್ರಮಾಣದಲ್ಲಿ ದಾಟಿದ್ದನ್ನು ಸೂಚಿಸುತ್ತದೆ. 

ನದಿಯ ಮೇಲ್ಭಾಗದ ಬಹುತೇಕ ಪ್ರದೇಶಗಳು ಕುಡಿಯುವ ನೀರಿನ ಮಾನದಂಡಗಳಿಗೆ ತಕ್ಕಂತೆ ಇದ್ದರೂ, ಕೆಳಭಾಗದ ಹಲವು ಸ್ಥಳಗಳು ಮಧ್ಯಮದಿಂದ ಹೆಚ್ಚಿನ ಅಪಾಯದ ಮಾಲಿನ್ಯ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ. ಜನನಿಬಿಡ ಪ್ರದೇಶಗಳ ಮೂಲಕ ನದಿ ಹರಿಯುವಾಗ ಮನೆಗಳ ತ್ಯಾಜ್ಯ ನೀರು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ರಸ್ತೆಗಳಿಂದ ಹರಿದುಬರುವ ನೀರು ನೇರವಾಗಿ ನದಿಗೆ ಸೇರುವುದರಿಂದ ಮಾಲಿನ್ಯ ಹೆಚ್ಚುತ್ತಿದೆ ಎಂದು ಅಧ್ಯಯನ ತಿಳಿಸಿದೆ. ನದಿ ದಡದ ಒತ್ತುವರಿಗಳು ನೈಸರ್ಗಿಕ ನೀರಿನ ಹರಿವಿಗೂ ಅಡ್ಡಿಯಾಗುತ್ತಿದ್ದು, ಮಳೆಗಾಲದಲ್ಲಿ ಮಾಲಿನ್ಯದ ಜೊತೆಗೆ ಪ್ರವಾಹದ ಅಪಾಯವನ್ನೂ ಹೆಚ್ಚಿಸುತ್ತಿವೆ. ಇಂದ್ರಾಣಿ ನದಿಯ ಮಾಲಿನ್ಯದ ಕುರಿತು ಈ ವರದಿಗಾರರು ಈ ಹಿಂದೆಯೂ ವರದಿಗಳ ಮೂಲಕ ಆಡಳಿತದ ಗಮನಕ್ಕೆ ತಂದಿದ್ದುಇದೀಗ ಸಂಶೋಧನಾ ಅಧ್ಯಯನವೂ ಇದೇ ಸಮಸ್ಯೆಯ ಗಂಭೀರತೆಯನ್ನು ತಿಳಿಸಿದೆ.