ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಇಬ್ಬರು ಅಂತರ್ರಾಜ್ಯ ಮನೆ ಕಳ್ಳತನ ಆರೋಪಿಗಳ ಬಂಧನ; ₹4.50 ಲಕ್ಷ ಮೌಲ್ಯದ ಸೊತ್ತು ವಶ
ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ಗೆ ಸೇರಿದವರಾದ ಇಬ್ಬರು ಅಂತರ್ರಾಜ್ಯ ಮನೆ ಕಳ್ಳತನ ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು Rs 4,50,500 ಮೌಲ್ಯದ ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 1ರಂದು ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆ ಸಹಾರಾ ಅಪಾರ್ಟ್ಮೆಂಟ್ ಬಳಿ ಇರುವ ಮನೆಯನ್ನು ಬೀಗ ಹಾಕಿ ಮಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದ 70 ವರ್ಷದ ಎ.ಎಸ್. ರಾಮಮೂರ್ತಿ ಅವರು ಜುಲೈ 9ರಂದು ಮನೆಗೆ ಹಿಂದಿರುಗಿದಾಗ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿತ್ತು. ಮನೆಯೊಳಗೆ ಪರಿಶೀಲಿಸಿದಾಗ Rs 6 ಲಕ್ಷ ನಗದು ಹಾಗೂ ಮೂರು ವಾಚ್ಗಳು ಕಳವಾಗಿರುವುದು ಕಂಡುಬಂದಿತ್ತು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೆಪ್ಟೆಂಬರ್ 2ರಂದು ಮೊದಲ ಆರೋಪಿ ಮೊಹಮ್ಮದ್ ಜಾಫರ್ (22), ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಶಿ ತಾಲೂಕಿನ ಅಕ್ರೌಲಿ ನಿವಾಸಿಯನ್ನು ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದರು. ವಿಚಾರಣೆಯಲ್ಲಿ ಜಾಫರ್ ತನ್ನ ಸ್ನೇಹಿತ ಕದೀರ್ನೊಂದಿಗೆ ಸೇರಿ ಮನೆಗೆ ನುಗ್ಗಿ Rs 6 ಲಕ್ಷ ನಗದು ಹಾಗೂ ಮೂರು ವಾಚ್ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳವು ಮಾಡಿದ ಹಣವನ್ನು ಇಬ್ಬರೂ ಸಮನಾಗಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಜಾಫರ್ನಿಂದ Rs 1.50 ಲಕ್ಷ ನಗದು ಮತ್ತು Rs 8,000 ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಉತ್ತರ ಪ್ರದೇಶಕ್ಕೆ ತೆರಳಿದ ಪೊಲೀಸರು Rs 1.06 ಲಕ್ಷ ನಗದು ವಶಪಡಿಸಿಕೊಂಡಿದ್ದರು.
ಮುಂದುವರಿದ ತನಿಖೆಯಲ್ಲಿ ಸೆಪ್ಟೆಂಬರ್ 25ರಂದು ಎರಡನೇ ಆರೋಪಿ ಕದೀರ್ (32), ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಅಕ್ರೌಲಿ ನಿವಾಸಿಯನ್ನು ಮೂಡಬಿದ್ರೆಯಲ್ಲಿ ಬಂಧಿಸಲಾಯಿತು. ಆತನಿಂದ ₹1.65 ಲಕ್ಷ ನಗದು, ₹6,000 ಮೌಲ್ಯದ ಎರಡು ಬೆಳ್ಳಿ ನಾಣ್ಯಗಳು, ₹15,000 ಮೌಲ್ಯದ ಐದು ವಾಚ್ಗಳು, ಕೃತ್ಯಕ್ಕೆ ಬಳಸಿದ ಎರಡು ಸ್ಕ್ರೂಡ್ರೈವರ್ಗಳು ಹಾಗೂ ₹200 ಮೌಲ್ಯದ ಕಂದು ಬಣ್ಣದ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಸದಸ್ಯರಾಗಿದ್ದು, ಬನಿಯಾಟೇರ್, ಚಂದೌಶಿ ಅಕ್ರೌಲಿ ಪ್ರದೇಶದವರು. ಮೊದಲ ಆರೋಪಿ ವಿರುದ್ಧ ಉತ್ತರಾಖಂಡದ ನೈನಿತಾಲ್ ಪೊಲೀಸ್ ಠಾಣೆಯಲ್ಲಿ ಒಂದು ಮನೆ ಕಳ್ಳತನ ಪ್ರಕರಣ ದಾಖಲಾಗಿದೆ. ಎರಡನೇ ಆರೋಪಿಯ ವಿರುದ್ಧ ಉತ್ತರ ಪ್ರದೇಶದ ಬನಿಯಾಟೇರ್ ಪೊಲೀಸ್ ಠಾಣೆಯಲ್ಲಿ ಒಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಹಾಗೂ ಎರಡು ಮನೆ ಕಳ್ಳತನ ಪ್ರಕರಣಗಳು, ಮುರಾದಾಬಾದ್ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಮತ್ತು ಎರಡು ಮನೆ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು ಆರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ದಾಖಲಾಗಿದೆ.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಯಿತು. ಪಿಎಸ್ಐ ರತ್ನಾಕರ್ ಕೆ., ಎಎಸ್ಐ ಹರೀಶ್, ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ ಗಾಣಿಗ, ಆನಂದ, ಓಬಳೇಶ್, ಆನಂದಯ್ಯ, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದರು.