ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯುಸೂಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ
ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು
2015ರಲ್ಲಿ ಮಂಗಳೂರು ಕಾರಾಗೃಹದಲ್ಲಿ ನಡೆದ ಮಾಡೂರು ಯುಸೂಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಟ್ಟು ರೂ.76,000 ದಂಡ ವಿಧಿಸಿದೆ. 2015ರ ನವೆಂಬರ್ 2ರಂದು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯುಸೂಫ್ ಅವನನ್ನು ಹತ್ಯೆ ಮಾಡಲಾಗಿತ್ತು. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಅಕ್ಟೋಬರ್ 1, 2026ರಂದು ಐವರು ಆರೋಪಿಗಳಾದ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್ ಹಾಗೂ ಉಮೇಶ್ ಕೊಂಬಾರ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ. ಮೋಹನ್ ಕುಮಾರ್ ವಾದ ಮಂಡಿಸಿದ್ದರು. ಅಂದಿನ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ತಿಲಕ್ ಚಂದ್ರ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣವು ಬರ್ಕೆ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 92/2015ರಂತೆ ಭಾರತೀಯ ದಂಡ ಸಂಹಿತೆಯ 143, 144, 147, 148, 324, 326, 353, 332, 307, 302, 120(ಬಿ), 37 ಜೊತೆಗೆ 149 ಐಪಿಸಿ ಕಲಂಗಳಡಿ ದಾಖಲಾಗಿತ್ತು.
2015ರಲ್ಲಿ ನಡೆದ ಮಾಡೂರು ಯುಸೂಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2026ರ ಸೆಪ್ಟೆಂಬರ್ 28ರಂದು ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಇತರ ಐವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
2015ರ ನವೆಂಬರ್ 2ರಂದು ಮಂಗಳೂರು ಕಾರಾಗೃಹದಲ್ಲಿ ಕೈದಿಗಳು ಬೆಳಗಿನ ಉಪಾಹಾರ ಸೇವಿಸುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಒಂದು ಗುಂಪಿನ ಸದಸ್ಯರು ಹರಿತವಾದ ಆಯುಧಗಳಿಂದ ಮಡೂರು ಇಸೂಬು ಅಲಿಯಾಸ್ ಮಾಡೂರು ಯುಸೂಫ್ ಹಾಗೂ ಅವನ ಸಹಚರ ಗಣೇಶ್ ಶೆಟ್ಟಿಯ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ ಮಾಡೂರು ಯುಸೂಫ್ಇ, ಅವನ ಸಹಚರ ಗಣೇಶ್ ಶೆಟ್ಟಿ ಇಬ್ಬರೂ ಮೃತಪಟ್ಟಿದ್ದರು. ಮಾಡೂರು ಯುಸೂಫ್ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹಾಗೂ ರೌಡಿ ಕ್ಯಾಂಡಲ್ ಸಂತು ಅವರ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.