ಎಂಐಟಿ ಕ್ಯಾಂಪಸ್ನಲ್ಲಿ ರೂ 12 ಲಕ್ಷ ವಂಚನೆ ಆರೋಪ; ಇ-ಮೊಬಿಲಿಟಿ ಕಂಪನಿಯ ಆರು ಸಿಬ್ಬಂದಿ ಬಂಧನ
ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ
ಮಣಿಪಾಲದ ಎಂಐಟಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಚಾರಕ್ಕಾಗಿ ಬ್ಯಾಟರಿ ಚಾಲಿತ ವಾಹನ ಸೇವೆ ಒದಗಿಸುತ್ತಿರುವ ಇಂಡಿಯಾಂಟಾ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ ಪ್ರಯಾಣಿಕರ ಶುಲ್ಕವನ್ನು ನಕಲಿ ಕ್ಯೂಆರ್ ಕೋಡ್ ಮೂಲಕ ಸಂಗ್ರಹಿಸಿ ಸುಮಾರು ರೂ 12 ಲಕ್ಷ ವಂಚನೆ ಮಾಡಿದ ಆರೋಪದ ಮೇಲೆ ಆರು ಮಂದಿ ಸಿಬ್ಬಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು ಅಕ್ಟೋಬರ್ 2ರಂದು ನೀಡಿದ ದೂರಿನ ಪ್ರಕಾರ, ಆರೋಪಿಗಳು 2026ರ ಏಪ್ರಿಲ್ 1ರಿಂದ ಕಂಪನಿಗೆ ಪಾವತಿಯಾಗಬೇಕಿದ್ದ ಪ್ರಯಾಣಿಕರ ಶುಲ್ಕವನ್ನು ಕಂಪನಿಯ ಅಧಿಕೃತ ಕ್ಯೂಆರ್ ಕೋಡ್ ಮೂಲಕ ಸ್ವೀಕರಿಸದೆ, ಮತ್ತೊಂದು ನಕಲಿ ವ್ಯವಹಾರ ಖಾತೆ ತೆರೆದು ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಸೃಷ್ಟಿಸಿದ್ದರು. ಪ್ರಯಾಣಿಕರು ಆ ಕ್ಯೂಆರ್ ಕೋಡ್ಗೆ ಪಾವತಿಸಿದ ಹಣವನ್ನು ಸಂಗ್ರಹಿಸಿ, ಕಂಪನಿಗೆ ಸೇರಬೇಕಿದ್ದ ಹಣವನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾಯಿಸಿಕೊಂಡು ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 316(4), 316(5), 318(2), 318(3), 318(4) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ಸಿದ್ದಮೂರ್ತಿ ಜಿ. (29), ಶಿವರಾಜ್ ನಾಯ್ಕ್ (30), ಸುದೀಪ್ (30), ಜಿತೇಶ್ ಕಾಂಚನ್ (29), ಮುತ್ತಣ್ಣ ಅಡಿನವರ್ (32) ಹಾಗೂ ಎಂ.ಬಿ. ಅವಿನಾಶ್ (24) ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆಯನ್ನು ಮಣಿಪಾಲ ಪೊಲೀಸ್ ಠಾಣೆಯ ತನಿಖಾ ಪಿಎಸ್ಐ ಶಂಭುಲಿಂಗಯ್ಯ ಎಂ. ಮುಂದುವರಿಸಿದ್ದು, ಅಕ್ಟೋಬರ್ 2ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದಿಂದ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.