ಎಸ್‌ಐಆರ್: ಸೆಪ್ಟೆಂಬರ್ ಅಂತ್ಯದೊಳಗೆ ಮೊದಲ ನೋಟಿಸ್ ಪ್ರಕರಣಗಳ ವಿಚಾರಣೆ ಪೂರ್ಣ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಉತ್ತರ ಕನ್ನಡ ಜಿಲ್ಲೆಯಲ್ಲಿ 65,248 ಪ್ರಕರಣಗಳು; 39,804 ಪ್ರಕರಣಗಳ ವಿಚಾರಣೆ ಪೂರ್ಣ

ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ ಹಾಗೂ ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಪ್ರಕರಣಗಳಿಗೆ ಸಂಬಂಧಿಸಿದ ಮೊದಲ ನೋಟಿಸ್‌ಗಳ ವಿಚಾರಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ ಹಾಗೂ ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಒಟ್ಟು 65,248 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಈಗಾಗಲೇ 64,749 ನೋಟಿಸ್‌ಗಳನ್ನು ವಿತರಿಸಲಾಗಿದ್ದು, 39,804 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಇನ್ನೂ 24,945 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಇವುಗಳ ವಿಚಾರಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ವಿಚಾರಣೆಯ ಸಂದರ್ಭದಲ್ಲಿ ಮರಣ ಹೊಂದಿರುವ ಅಥವಾ ದ್ವಿ-ನೋಂದಣಿ ಹೊಂದಿರುವ 85 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕ್ಷೇತ್ರವಾರು ಮಾಹಿತಿ ನೀಡಿದ ಅವರು, ಹಳಿಯಾಳದಲ್ಲಿ 14,012 ನೋಟಿಸ್‌ಗಳ ಪೈಕಿ 8,907 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಕಾರವಾರದಲ್ಲಿ 10,446 ನೋಟಿಸ್‌ಗಳಲ್ಲಿ 5,881, ಕುಮಟಾದಲ್ಲಿ 8,344 ನೋಟಿಸ್‌ಗಳಲ್ಲಿ 4,984, ಭಟ್ಕಳದಲ್ಲಿ 13,660 ನೋಟಿಸ್‌ಗಳಲ್ಲಿ 6,889, ಶಿರಸಿಯಲ್ಲಿ 8,821 ನೋಟಿಸ್‌ಗಳಲ್ಲಿ 5,428 ಹಾಗೂ ಯಲ್ಲಾಪುರದಲ್ಲಿ 9,965 ನೋಟಿಸ್‌ಗಳಲ್ಲಿ 7,715 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ವಿವರಿಸಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 23 ಕೊನೆಯ ದಿನಾಂಕವಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ಲಕ್ಷ್ಮೀಪ್ರಿಯಾ ತಿಳಿಸಿದರು. ಸೆಪ್ಟೆಂಬರ್ 19 ಮತ್ತು 20ರಂದು ನಡೆದ ಮತದಾರರ ವಿಶೇಷ ಆಂದೋಲನದಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳಲು 2,613 ಅರ್ಜಿಗಳು, ಆಕ್ಷೇಪಣೆ ಸಲ್ಲಿಸಲು 89 ಅರ್ಜಿಗಳು ಹಾಗೂ ತಿದ್ದುಪಡಿಗಾಗಿ 1,395 ಅರ್ಜಿಗಳು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂಜಯ್ ಸಾಲುಂಕೆ, ಜೆಡಿಎಸ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಕಾಂಗ್ರೆಸ್ ಪಕ್ಷದ ತಾಲೂಕು ಉಪಾಧ್ಯಕ್ಷ ಬಾಬು ಶೇಖ್, ಬ್ಲಾಕ್ ಅಧ್ಯಕ್ಷ ಅರವಿಂದ ಕಲಗುಟ್ಕರ್ ಹಾಗೂ ಚುನಾವಣಾ ಶಾಖೆಯ ತಹಸೀಲ್ದಾರ್ ಪ್ರಮೋದ್ ನಾಯ್ಕ ಉಪಸ್ಥಿತರಿದ್ದರು.