ಸ್ವೀಡನ್‌ನಿಂದ ಕುಂದಾಪುರಕ್ಕೆ; ಕುಂದಾಪುರದ ಚಿತ್ರಕೂಟದಲ್ಲಿ ಸ್ವೀಡನ್ ಮಹಿಳೆ ‘ಗೌರಿ’ಯಾಗಿ ಗೋಸೇವೆ

ಕೋಸ್ಟಲ್ ಟಾಕ್ ನ್ಯೂಸ್ | ಕುಂದಾಪುರ

ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಬೇರುಗಳನ್ನು ಅರಿಯುವ ಆಸಕ್ತಿಯಿಂದ ಸ್ವೀಡನ್ ಮೂಲದ ಮಹಿಳೆಯೊಬ್ಬರು ಕುಂದಾಪುರಕ್ಕೆ ಆಗಮಿಸಿದ್ದಾರೆ. ಪ್ರಸ್ತುತ ಸ್ಪೇನ್‌ನ ನಿವಾಸಿಯಾಗಿರುವ ಅವರು, ಭಾರತೀಯ ಸಂಸ್ಕೃತಿ, ಹಿಂದೂ ಧರ್ಮದ ತತ್ವಗಳು ಹಾಗೂ ಆಧ್ಯಾತ್ಮಿಕ ಪರಂಪರೆಯಿಂದ ಆಕರ್ಷಿತರಾಗಿ ಹಲವು ವರ್ಷಗಳಿಂದ ಯೋಗ, ಧ್ಯಾನ, ಪ್ರಕೃತಿ ಸಂರಕ್ಷಣೆ ಹಾಗೂ ಗೋಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ವೀಡನ್ ಮೂಲದ ವಿಲ್ಹೆಲ್ಮಿನಾ ಸಾರಾ ಆಸಾ ಪೀಟರ್ಸನ್ ಅವರು ಇದೀಗ ‘ಗೌರಿ’ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ಸನಾತನ ಧರ್ಮದ ಮೇಲಿನ ತಮ್ಮ ಆಳವಾದ ಆಸಕ್ತಿಯಿಂದಾಗಿ, ತಮ್ಮ ಗುರುಗಳಾದ ಸ್ವಾಮಿ ಈಶಾನಂದ ಸರಸ್ವತಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ‘ಗೌರಿ’ ಎಂಬ ಹೆಸರನ್ನು ಸ್ವೀಕರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಭಾರತಕ್ಕೆ ಭೇಟಿ ನೀಡುವ ಸಂದರ್ಭಗಳಲ್ಲಿ ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ವಾಸ್ತವ್ಯ ಹೂಡುವುದು ಅವರ ಸಂಪ್ರದಾಯವಾಗಿದೆ. ಹಸಿರು ಪರಿಸರದ ನಡುವೆ ಯೋಗ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ, ಅಲ್ಲಿನ ಗೋಶಾಲೆಯಲ್ಲಿರುವ ಸ್ಥಳೀಯ ತಳಿಯ ಹಸುಗಳೊಂದಿಗೆ ಸಮಯ ಕಳೆಯುವುದು ತಮ್ಮ ದಿನಚರಿಯ ಪ್ರಮುಖ ಭಾಗವಾಗಿದೆ.

ತಮ್ಮ ಅನುಭವ ಹಂಚಿಕೊಂಡ ಗೌರಿ, “ಹಿಂದೂ ಧರ್ಮ ಮತ್ತು ಸನಾತನ ಸಂಸ್ಕೃತಿಯಿಂದ ಆಕರ್ಷಿತಳಾಗಿ, ನನ್ನ ಗುರು ಸ್ವಾಮಿ ಈಶಾನಂದ ಸರಸ್ವತಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ‘ಗೌರಿ’ ಎಂಬ ಹೆಸರನ್ನು ಸ್ವೀಕರಿಸಿದೆ. ಪ್ರಸ್ತುತ ಅದ್ವೈತ ವೇದಾಂತವನ್ನು ಅಧ್ಯಯನ ಮಾಡುತ್ತಿದ್ದೇನೆ. ಚಿತ್ರಕೂಟದ ಶಾಂತ ವಾತಾವರಣ, ಸಿಬ್ಬಂದಿಯ ಆತ್ಮೀಯತೆ ಹಾಗೂ ಗ್ರಾಮೀಣ ಪರಿಸರ ನನಗೆ ಬಹಳ ಇಷ್ಟ. ಇದು ಇಲ್ಲಿಗೆ ನನ್ನ ಮೂರನೇ ಭೇಟಿ. ಹಸುಗಳೊಂದಿಗೆ ಸಮಯ ಕಳೆಯುವುದರಿಂದ ನನಗೆ ಅಪಾರ ಮಾನಸಿಕ ನೆಮ್ಮದಿ ದೊರೆಯುತ್ತದೆ. ಇಲ್ಲಿ ಪ್ರತಿಯೊಬ್ಬರ ಅಗತ್ಯಕ್ಕೆ ಅನುಗುಣವಾಗಿ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತದೆ,” ಎಂದರು.

ಕುಂದಾಪುರದ ವಾಸ್ತವ್ಯದ ಬಳಿಕ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಪ್ರಸಿದ್ಧ ರಮಣ ಮಹರ್ಷಿ ಆಶ್ರಮಕ್ಕೆ ಭೇಟಿ ನೀಡುವ ಯೋಜನೆ ಅವರು ಹೊಂದಿದ್ದಾರೆ. ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯ ವೈದ್ಯ ಹಾಗೂ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಮಾತನಾಡಿ, “ಗೌರಿ ಅವರು ಭಾರತೀಯ ಸನಾತನ ಸಂಸ್ಕೃತಿಯ ಬಗ್ಗೆ ಶುದ್ಧ ಮತ್ತು ದೃಢವಾದ ಗೌರವವನ್ನು ಹೊಂದಿದ್ದಾರೆ. ಇಲ್ಲಿ ವಾಸ್ತವ್ಯವಿರುವ ಅವಧಿಯಲ್ಲಿ ಅವರು ನಿರಂತರವಾಗಿ ‘ಓಂ ನಮಃ ಶಿವಾಯ’ ಎಂಬ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿರುತ್ತಾರೆ. ಅವರ ಆಧ್ಯಾತ್ಮಿಕ ಬದ್ಧತೆ ಹಾಗೂ ಭಕ್ತಿ ನೋಡುವುದೇ ಪ್ರೇರಣಾದಾಯಕ,” ಎಂದರು. ಸ್ಥಳೀಯರು ಪಾಶ್ಚಾತ್ಯ ಜೀವನಶೈಲಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ವಿದೇಶಿ ಮಹಿಳೆಯೊಬ್ಬರು ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯತ್ತ ಆಳವಾದ ಆಸಕ್ತಿ ತೋರಿಸುತ್ತಿರುವುದು ಗಮನ ಸೆಳೆಯುವಂತಾಗಿದೆ.