ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ
ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿಗೆ ನಿರ್ಮಾಣ ಸಾಮಗ್ರಿ ಸಾಗಿಸಲು ಅನುಕೂಲವಾಗುವಂತೆ ಕೈಗಾ-ಕಾರವಾರ ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ. ಆದರೆ, ಪ್ರತಿ ಆಕ್ಸಲ್ಗೆ ಗರಿಷ್ಠ 15 ಮೆಟ್ರಿಕ್ ಟನ್ ಭಾರ ಸಾಗಿಸಲು ಮಾತ್ರ ಅನುಮತಿ ನೀಡಲಾಗಿದೆ.
ಹೆದ್ದಾರಿಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಈ ಹಿಂದೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ, ರಸ್ತೆ ದುರಸ್ತಿ ಮಾಡುವಂತೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ಗೆ (ಎನ್ಪಿಸಿಐಎಲ್) ಸೂಚಿಸಲಾಗಿತ್ತು. ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಸಂಚಾರ ನಿರ್ಬಂಧ ತೆರವುಗೊಳಿಸಲಾಯಿತು.
ವಾಹನಗಳು ನಿಗದಿತ ಭಾರದ ಮಿತಿಯನ್ನು ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಎನ್ಪಿಸಿಐಎಲ್ ವಹಿಸಿಕೊಂಡಿದೆ. ರಸ್ತೆ ಮತ್ತೆ ಹದಗೆಟ್ಟರೆ ತಕ್ಷಣ ದುರಸ್ತಿ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.