ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ 

ಗರುಡ ಗ್ಯಾಂಗ್‌ನ ಕೆಲವರ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಆಯುಧಗಳನ್ನು ಇಟ್ಟುಕೊಂಡಿದ್ದಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿಯ ಕಿನ್ನಿಮುಲ್ಕಿ ನಿವಾಸಿ ಮಹಮ್ಮದ್ ಪರ್ವೇಜ್ (26) ಎಂದು ಗುರುತಿಸಲಾಗಿದೆ.

ಮಹಮ್ಮದ್ ಪರ್ವೇಜ್
ಮಹಮ್ಮದ್ ಪರ್ವೇಜ್

ಅಕ್ಟೋಬರ್ 24ರಂದು ಗಸ್ತಿನಲ್ಲಿದ್ದ ಮಣಿಪಾಲ ಠಾಣೆಯ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ. ಇ. ಅವರಿಗೆ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆಯುಧಗಳೊಂದಿಗೆ ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಮಾಹಿತಿ ದೊರೆಯಿತು. ಠಾಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಅವರು ಪರ್ವೇಜ್‌ನನ್ನು ವಶಕ್ಕೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಬಳಿಯಿಂದ ಸುಮಾರು 20 ಇಂಚು ಉದ್ದದ ಕಬ್ಬಿಣದ ಲಾಂಗ್ ಮತ್ತು 16 ಇಂಚು ಉದ್ದದ ಕಬ್ಬಿಣದ ಚಾಕುವನ್ನು ಜಪ್ತಿ ಮಾಡಲಾಗಿದೆ. ದಾವೂದ್, ಇಸಾಕ್ ಹಾಗೂ ಗರುಡ ಗ್ಯಾಂಗ್‌ನ ಕೆಲವರೊಂದಿಗೆ ವೈಮನಸ್ಸು ಇರುವುದರಿಂದ ಹಲ್ಲೆ ನಡೆಸಲು ಆಯುಧಗಳನ್ನು ಇಟ್ಟುಕೊಂಡಿದ್ದಾಗಿ ಆತ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರ್ವೇಜ್ ವಿರುದ್ಧ ಉಡುಪಿ ನಗರ, ಶಿರ್ವ, ಸೆನ್ ಮತ್ತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.