ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಜೈಲು ವಾರ್ಡನ್ಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ.40,000 ದಂಡ ವಿಧಿಸಿದೆ.
2011ರ ಡಿಸೆಂಬರ್ 3ರಂದು ಮಧ್ಯಾಹ್ನ 1.20ರ ಸುಮಾರಿಗೆ ಹಿರಿಯಡ್ಕದ ಉಡುಪಿ ಜಿಲ್ಲಾ ಕಾರಾಗೃಹದ 1 ನೇ ಬ್ಯಾರಕ್ ಎದುರಿನ ವರಾಂಡದಲ್ಲಿ ಘಟನೆ ನಡೆದಿತ್ತು. ಜೈಲು ವಾರ್ಡನ್ ಬಂಧಿಗಳ ಲೆಕ್ಕ ತೆಗೆದುಕೊಳ್ಳಲು ಅವರವರ ಬ್ಯಾರಕ್ಗಳಿಗೆ ತೆರಳುವಂತೆ ಸೂಚಿಸುತ್ತಿದ್ದ ಸಂದರ್ಭದಲ್ಲಿ, ಅಡುಗೆ ಕೋಣೆಯ ಎದುರುಗಡೆ ಇದ್ದ ವಿಚಾರಣಾ ಬಂಧಿ ಸಂಖ್ಯೆ 1249 ಸಫಾನ್ ಹುಸೇನ್ ಅಲಿಯಾಸ್ ರಜಾಕ್, ವಾರ್ಡನ್ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಎಡ ಕೆನ್ನೆಗೆ ಹೊಡೆದಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ದಸ್ತಗಿರಿ ಮಾಡಿದ್ದರು. 2012ರ ಜನವರಿ 10ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.
ನಂತರ ನ್ಯಾಯಾಲಯವು 2013ರ ಮೇ 29ರಂದು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಆರೋಪಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ, 2022ರ ಜೂನ್ 24ರಂದು ಪ್ರಕರಣವನ್ನು ಎಲ್ಪಿಸಿ ಸಂಖ್ಯೆ 02/2022 ಎಂದು ದಾಖಲಿಸಲಾಗಿತ್ತು. ನಂತರ ಸಫಾನ್ ಹುಸೇನ್ನನ್ನು 2026ರ ಏಪ್ರಿಲ್ 23ರಂದು ಬಾಡಿ ವಾರಂಟ್ ಮೂಲಕ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣವು ಎಸ್.ಸಿ. ಸಂಖ್ಯೆ 21/2026ರಂತೆ ವಿಚಾರಣೆಗೆ ಒಳಪಟ್ಟಿದ್ದು, ಸೆಪ್ಟೆಂಬರ್ 28, 2026ರಂದು ನ್ಯಾಯಾಲಯವು ಆರೋಪಿಗೆ ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ.40,000 ದಂಡ ವಿಧಿಸಿ ತೀರ್ಪು ನೀಡಿದೆ.