ಕೋಸ್ಟಲ್ ಟಾಕ್ ನ್ಯೂಸ್ | ಮೈಸೂರು
"ಕಂಬಳ ಶ್ರಮಿಕರ ಕ್ರೀಡೆ, ಕರಾವಳಿ ಭಾಗದ ಜನರ ಸಾಂಸ್ಕೃತಿಕ ಹಬ್ಬ. ಕೃಷಿ ಮಣ್ಣಿನಲ್ಲಿ ಹುಟ್ಟಿದ್ದು ಕಂಬಳ, ಕೃಷಿ ಸಂಸ್ಕೃತಿಯ ಮೂಲ. ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿ ಕಂಬಳದ ವೈಶಿಷ್ಟ್ಯ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು. ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕಂಬಳ ಸ್ಪರ್ಧೆಗೆ ಶಿವಕುಮಾರ್ ಅವರು ಭಾನುವಾರ ಚಾಲನೆ ನೀಡಿ ಮಾತನಾಡಿದರು.
"ಇದು ಕನ್ನಡ ನಾಡಿನ ಹಬ್ಬ. ತಾಯಿ ಚಾಮುಂಡಿಯ ಹಬ್ಬಕ್ಕೆ ಕರಾವಳಿಯಿಂದ ಕಂಬಳ ಕಾರ್ಯಕ್ರಮವನ್ನು ತಂದಿದ್ದೇವೆ. 800 ವರ್ಷಗಳ ಹಿಂದೆ ರೈತರ ಬದುಕು ಕಾಪಾಡುವಂತೆ ಕದ್ರಿ ಮಂಜುನಾಥನ ಸೇವೆಗೆ, ಪ್ರಾರ್ಥನೆಗೆ ಈ ಕಂಬಳ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುತ್ತದೆ. ಈ ಆಚರಣೆ ಬಗ್ಗೆ ದೇಶದಾದ್ಯಂತ ಚರ್ಚೆ ಮಾಡಿ ಕಾನೂನು ತರಲಾಗಿದೆ" ಎಂದರು. "ಭತ್ತದ ಗದ್ದೆ, ಮಳೆ, ಮಣ್ಣು, ಕೋಣ, ರೈತರ ಬದುಕನ್ನು ನಾವು ಕಂಬಳದಲ್ಲಿ ನೋಡುತ್ತಿದ್ದೇವೆ. ಕೃಷಿಯ ಶ್ರಮಿಕರಿಗೆ ಗೌರವಿಸಲು, ನಮ್ಮ ಕ್ರೀಡೆ ಹಾಗೂ ಕಲೆಗೆ ಉತ್ತೇಜನ ನೀಡಲು ನಾವು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಇದರ ಬಗ್ಗೆ ಟೀಕೆಗಳು ಬಂದವು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ಟೀಕೆ ಮಾಡುವುದು ತಪ್ಪಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಎಲ್ಲಾ ಸಂಸ್ಕೃತಿ, ಪರಂಪರೆಯನ್ನು ಈ ದಸರಾ ಕಾರ್ಯಕ್ರಮದ ಭಾಗವಾಗಿ ಮಾಡಲು ನಾವು ಮುಂದಾಗಿದ್ದೇವೆ" ಎಂದರು.
ದಸರಾ ಬಗ್ಗೆ ರೀಲ್ ಮಾಡಿ, 100 ಅತ್ಯುತ್ತಮ ರೀಲ್ ಮಾಡಿದವರಿಗೆ ಪ್ರಶಸ್ತಿ
ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಈ ಕಂಬಳ ವೀಕ್ಷಣೆ ಮಾಡಿದ್ದಾರೆ. ರಾಜ್ಯದ ಜನರು ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ರೀಲ್ ಮಾಡಿ ಮೈಸೂರು ದಸರಾ ಪೇಜ್ (mysoredasara.2026) ಗೆ ಟ್ಯಾಗ್ ಮಾಡಿ. ಅತ್ಯುತ್ತಮ 100 ರೀಲ್ ಮಾಡಿದವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು. ರಾಜ್ಯದ ಯಾವ ಭಾಗದ ಜನರದರೂ ಸರಿ, ದೀಪಾಲಂಕಾರ, ಜಂಬೂಸವಾರಿ, ಕ್ರೀಡೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಯಾವುದರ ಬಗ್ಗೆ ಬೇಕಾದರೂ ರೀಲ್ ಮಾಡಬಹುದು.