ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ
“ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ” ಜನಾಂದೋಲನವಾಗಿ ರೂಪಾಂತರಗೊಂಡಿದೆ. ಈ ಯೋಜನೆಯು ಜನರು, ರಾಜ್ಯಗಳು ಮತ್ತು ದೇಶಕ್ಕೆ ಕಲ್ಯಾಣ ಹಾಗೂ ಉಳಿತಾಯವನ್ನು ಖಚಿತಪಡಿಸಿದೆ” ಎಂದು ಕೇಂದ್ರ ನವೀಕರಿಸಬಹುದಾದ ಇಂಧನ, ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನವದೆಹಲಿಯಲ್ಲಿ ಬುಧವಾರ ನಡೆದ ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್ಪೋ 2026ರ ಮೂರನೇ ದಿನದ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಮೇಲ್ಛಾವಣಿ ಸೌರಶಕ್ತಿ ಯೋಜನೆಯ ಪರಿಣಾಮವಾಗಿ ಭಾರತದಲ್ಲಿ ಪ್ರತಿ ಆರು ದಿನಗಳಿಗೊಮ್ಮೆ ಸುಮಾರು ಒಂದು ಲಕ್ಷ ರೂಫ್ಟಾಪ್ ಸೋಲಾರ್ ಘಟಕಗಳನ್ನು ಅಳವಡಿಸಲಾಗುತ್ತಿದೆ ಎಂದು ಜೋಶಿ ತಿಳಿಸಿದರು. ಇದರಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುವುದರ ಜೊತೆಗೆ, ವಿದ್ಯುತ್ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ದೇಶದ ಇಂಧನ ಭದ್ರತೆಯೂ ಬಲಗೊಳ್ಳುತ್ತಿದೆ ಎಂದರು. ಈ ಯೋಜನೆಯಿಂದ ಲಕ್ಷಾಂತರ ಕುಟುಂಬಗಳ ವಿದ್ಯುತ್ ಬಿಲ್ ಶೂನ್ಯವಾಗುತ್ತಿದೆ. ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಮಾರಾಟ ಮಾಡುವ ಮೂಲಕ ಕುಟುಂಬಗಳು ಗಣನೀಯ ಆದಾಯವನ್ನೂ ಗಳಿಸುತ್ತಿವೆ ಎಂದು ಹೇಳಿದರು.
ಭಾರತದ ಸೌರಶಕ್ತಿ ಸಾಮರ್ಥ್ಯದಲ್ಲಿ ಗಣನೀಯ ಏರಿಕೆಯಾಗಿದೆ. 2014ರಲ್ಲಿ ಕೇವಲ 3 ಗಿಗಾವ್ಯಾಟ್ ಇದ್ದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯ ಇಂದು 172 ಗಿಗಾವ್ಯಾಟ್ಗೆ ತಲುಪಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ನಡೆದ ‘ದಿ ನೆಕ್ಸ್ಟ್ ಟೆರಾವಾಟ್ ಡಿಪ್ಲೊಮ್ಯಾಟಿಕ್ ಡೈಲಾಗ್’ ಕಾರ್ಯಕ್ರಮದಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಮಾತನಾಡಿದರು. ಮುಂದಿನ ಒಂದು ಟೆರಾವ್ಯಾಟ್ ಶುದ್ಧ ಇಂಧನ ಉತ್ಪಾದನೆಯ ಗುರಿ ಸಾಧಿಸಲು ದೇಶಗಳು, ತಂತ್ರಜ್ಞಾನಗಳು ಮತ್ತು ಸಂಸ್ಥೆಗಳ ನಡುವೆ ಸಹಕಾರ ಅಗತ್ಯ ಎಂದು ಅವರು ಹೇಳಿದರು. ದೇಶಗಳ ನಡುವಿನ ಪಾಲುದಾರಿಕೆ, ಹೂಡಿಕೆ, ತಂತ್ರಜ್ಞಾನ, ಅನುಷ್ಠಾನ ಮತ್ತು ಸಾಮರ್ಥ್ಯ ವೃದ್ಧಿ ಕುರಿತು ರಾಜತಾಂತ್ರಿಕ ಪ್ರತಿನಿಧಿಗಳ ಅಭಿಪ್ರಾಯಗಳನ್ನೂ ಸಚಿವರು ಆಲಿಸಿದರು.