ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು 

ಬೆಂಗಳೂರು ನಗರದ ಅಭಿವೃದ್ಧಿಗೆ ಮುಂದಿನ 10-15 ವರ್ಷಗಳ ಸಮಗ್ರ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಸಲಹಾ ಸಮಿತಿ ಸಭೆಯಲ್ಲಿ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು. 2047ರ ಅವಧಿಗೆ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪುವ ಗುರಿಯನ್ನು ಹೊಂದಲಾಗಿದೆ. 2037ರ ಅವಧಿಗೆ ರಾಜ್ಯದ ಆರ್ಥಿಕತೆ 400-420 ಬಿಲಿಯನ್ ಡಾಲರ್ ತಲುಪುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ (ಬಿಎಂಆರ್) ಯಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಸತಿ, ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆಯನ್ನು ಸಿದ್ಧಪಡಿಸಲಾಗುತ್ತಿದೆ. ಬಿಎಂಆರ್ ವ್ಯಾಪ್ತಿಯಲ್ಲಿ 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್ಶಿಪ್ ರೂಪಿಸಬೇಕಾಗಿದೆ” ಎಂದು ವಿವರಿಸಿದರು.

ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯ ಪ್ರದೇಶವನ್ನು BWSSB ಅಡಿ ಸೇರ್ಪಡೆಗೊಳಿಸಿ  ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿದೆ. ಆ ಮೂಲಕ ಜಿಲ್ಲೆಯಾದ್ಯಂತ ನೀರು ವಿತರಣಾ ಸಾಮರ್ಥ್ಯ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುವುದು. ಇದರೊಂದಿಗೆ ಜಿಲ್ಲೆಯ ಸಂಪೂರ್ಣ ರಸ್ತೆ ಜಾಲವನ್ನು ಗುರುತಿಸಿ, ಅಭಿವೃದ್ಧಿಗೆ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು. 

ಬೆಂಗಳೂರು ನಗರ ಹಾಗೂ ಬೆಂಗಳೂರು ಹೊರವಲಯದಲ್ಲಿ ಸುಗಮ ಸಂಚಾರವನ್ನು ಖಾತ್ರಿಪಡಿಸಲು ಸಂಚಾರ ವ್ಯವಸ್ಥೆಯ ವಿಸ್ತೃತ ಯೋಜನೆ ಸಿದ್ಧಪಡಿಸಲಾಗಿದೆ. 2037ರ ವೇಳೆಗೆ ಹೆಚ್ಚುವರಿ 312 ಕಿ.ಮೀ. ಮೆಟ್ರೋ ಸಂಪರ್ಕ ವಿಸ್ತರಿಸಲು ಉದ್ದೇಶಿಸಿದೆ. ಈ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬಿಎಂಆರ್ ವ್ಯಾಪ್ತಿಯಲ್ಲಿ 2037 ರ ವೇಳೆಗೆ 3600 ಎಂಎಲ್ ಡಿ ನೀರಿನ ಅಗತ್ಯವಿದೆ. ಕುಡಿಯಲು ಹಾಗೂ ಕೈಗಾರಿಕೆಗೆ ಅಗತ್ಯವಾದ ನೀರನ್ನು ಒದಗಿಸುವ ಕುರಿತು ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು. ಮುಂದಿನ 10  ವರ್ಷಗಳಲ್ಲಿ ನಗರದ ಕುಡಿಯುವ ಹಾಗೂ ಕೈಗಾರಿಕಾ ಅಗತ್ಯತೆಗಳನ್ನು ಗಮನಿಸಿ, ಸಂಸ್ಕರಿಸಿದ ನೀರಿನ ಮರುಬಳಕೆ, ಕೆರೆಗಳನ್ನು ತುಂಬಿಸುವುದು ಸೇರಿದಂತೆ ಮುಂತಾದ ಯೋಜನೆಗಳಿಗೆ ಆದ್ಯತೆ ನೀಡುವಂತೆ ಸಿಎಂ ಸೂಚನೆ ನೀಡಿದರು.