ಭಾರತದ ಆವಿಷ್ಕಾರಗಳ ಉತ್ಕರ್ಷವೇ ವಿಕಸಿತ ಭಾರತದ ಕನಸಿನ ವೇಗವರ್ಧಕ: ಪ್ರಲ್ಹಾದ್ ಜೋಶಿ
ಬೆಂಗಳೂರಿನ ಐಐಎಸ್ಸಿಯಲ್ಲಿ ‘ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್’ ಉದ್ಘಾಟಿಸಿದ ಕೇಂದ್ರ ಶಿಕ್ಷಣ ಸಚಿವ
ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು
‘ಸೇವಾ’ ಮನೋಭಾವವನ್ನು ಆವಿಷ್ಕಾರದೊಂದಿಗೆ ಸಂಯೋಜಿಸಿ, ನೈಜ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪ್ರಾಯೋಗಿಕ ಹಾಗೂ ವ್ಯಾಪಕವಾಗಿ ಅಳವಡಿಸಿಕೊಳ್ಳಬಹುದಾದ ಪರಿಹಾರಗಳನ್ನು ರೂಪಿಸುವಂತೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಯುವಜನತೆಗೆ ಕರೆ ನೀಡಿದರು. ಈ ಮೂಲಕ ಯುವಜನತೆ 2047ರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಶುಕ್ರವಾರ ದಕ್ಷಿಣ ವಲಯದ ‘ಸೇವಾ ಫಸ್ಟ್ ಇನ್ನೋವೇಶನ್ ಚಾಲೆಂಜ್’ (SFIC) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಚಿವರು SFIC ವೆಬ್ಸೈಟ್ ಹಾಗೂ ನೋಂದಣಿ ಪೋರ್ಟಲ್ನ್ನು ಉದ್ಘಾಟಿಸಿದರು.
“ಸೇವೆಯು ಕಾರ್ಯರೂಪದಲ್ಲಿ ವ್ಯಕ್ತವಾಗಬೇಕು” ಎಂದು ಹೇಳಿದ ಸಚಿವರು, ಸಮಸ್ಯೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ನವೀನ ಪರಿಹಾರ ಕಂಡುಹಿಡಿದು, ಅದನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದು ಸೇವೆಯ ಪ್ರಮುಖ ಅಭಿವ್ಯಕ್ತಿಯಾಗಿದೆ ಎಂದರು. ಭಾರತದ ಜನಸಂಖ್ಯಾ ಲಾಭಾಂಶವನ್ನು ಉಲ್ಲೇಖಿಸಿದ ಪ್ರಲ್ಹಾದ್ ಜೋಶಿ, ದೇಶದ ಸುಮಾರು ಶೇ.65ರಷ್ಟು ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದರು. ಕುತೂಹಲ, ಆತ್ಮವಿಶ್ವಾಸ ಹಾಗೂ ತಂತ್ರಜ್ಞಾನದೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಯುವ ಪೀಳಿಗೆ ನಮ್ಮಲ್ಲಿದ್ದು, ಅವರ ಕುತೂಹಲವನ್ನು ಸಾರ್ಥಕ ಕಾರ್ಯಗಳಾಗಿ ಪರಿವರ್ತಿಸಲು ಅಗತ್ಯ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಮಹತ್ವವನ್ನು ಪ್ರಸ್ತಾಪಿಸಿದ ಅವರು, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಅನುಭವಾಧಾರಿತ ಕಲಿಕೆ ಮತ್ತು ಸಮಸ್ಯೆ ಪರಿಹಾರಕ್ಕೆ ಶಿಕ್ಷಣದಲ್ಲಿ ಆದ್ಯತೆ ನೀಡಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದಲೇ ಪ್ರಯೋಗ, ನಿರ್ಮಾಣ ಮತ್ತು ಆವಿಷ್ಕಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ಈ ದೃಷ್ಟಿಕೋನವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ 10,000ಕ್ಕೂ ಅಧಿಕ ಅಟಲ್ ಟಿಂಕರಿಂಗ್ ಲ್ಯಾಬ್ಗಳು, ಸುಮಾರು 17,300 ಇನ್ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ಗಳು ಹಾಗೂ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ನಂತಹ ವಿವಿಧ ಉಪಕ್ರಮಗಳ ಮೂಲಕ ಬಲಿಷ್ಠ ಆವಿಷ್ಕಾರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಸಚಿವರು ವಿವರಿಸಿದರು.