ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ 23 ವರ್ಷದ ಯುವಕನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ ಮೊಹಮ್ಮದ್ ನಿಸಾರ್ ಎಂದು ಗುರುತಿಸಲಾಗಿದೆ.
ನವೆಂಬರ್ 5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಸೇತುವೆ ಬಳಿ ಗಾಂಜಾ ಮಾರಾಟಕ್ಕೆ ತಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಹಾಗೂ ಪಣಂಬೂರು ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.
ಆತನಿಂದ ಸುಮಾರು 3 ಕೆ.ಜಿ. 800 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹1.90 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಸಾಗಿಸಲು ಬಳಸಿದ್ದ ಕೆಎಲ್ 14 1662 ನೋಂದಣಿಯ ಕಾರು ಹಾಗೂ ಒಂದು ಮೊಬೈಲ್ ಫೋನ್ನ್ನೂ ವಶಪಡಿಸಿಕೊಳ್ಳಲಾಗಿದೆ. ಕಾರಿನ ಮೌಲ್ಯ ₹2 ಲಕ್ಷ ಹಾಗೂ ಮೊಬೈಲ್ನ ಮೌಲ್ಯ ₹4 ಸಾವಿರ ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹3.94 ಲಕ್ಷವಾಗಿದೆ.
ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಈ ಹಿಂದೆ ಕೂಡ ಹಲವು ಬಾರಿ ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ಆತ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.