ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ 

ಸಾರ್ವಜನಿಕರ ಸತತ ಬೇಡಿಕೆಗಳನ್ನು ಪರಿಗಣಿಸಿ ಬೆಂಗಳೂರಿನಿಂದ ಮಂಗಳೂರಿನ ಪಡೀಲ್ ಮೂಲಕ ಉಡುಪಿ ಕಾರವಾರ ಮಡಗಾಂವಿಗೆ ಘೋಷಣೆಯಾಗಿದ್ದ 06591- ಯಶವಂತಪುರ–ಮಡಗಾಂವ್ ವಿಶೇಷ ನವರಾತ್ರಿ ರೈಲನ್ನು ಕೆಲವು ಲಾಬಿಗಳಿಗೆ ಮಣಿದು ನೈರುತ್ಯ ರೈಲ್ವೇ ರೈಲಿನ ಎಲ್ಲಾ ಟಿಕೇಟುಗಳೂ ಖಾಲಿಯಾದ ಮೇಲೆ, ಚಾರ್ಟ್ ಬಿಡುಗಡೆಯಾದ ಮೇಲೆ ರೈಲಿನ ಮಾರ್ಗವನ್ನು ಪಡೀಲಿನಿಂದ ಮಂಗಳೂರು ಜಂಕ್ಷನ್ ಮೂಲಕ ಬದಲಿಸಿದ್ದು ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾಗಿದೆ. 

ಮಂಗಳೂರಿನಿಂದ ಮತ್ತೂ 400 ಕಿಲೋಮೀಟರ್ ಹೋಗ ಬೇಕಾಗುವ ಈ ರೈಲುಗಳು ನೇರ ಮಾರ್ಗದಲ್ಲಿ ಬಂದರೆ ಮಾತ್ರ ಟಿಕೇಟು ಬುಕ್ ಮಾಡುವುದಾಗಿಯೂ ಒಂದೊಮ್ಮೆ ಅದು ಮಂಗಳೂರು ಜಂಕ್ಷನ್ ಮೂಲಕ ಓಡುವುದಾದರೆ ಅಂತಹ ರೈಲು ಸೇವೆಗಳೇ ನಮಗೆ ಬೇಡ ಎಂದು ಸಾರ್ವಜನಿಕರ ಸ್ಪಷ್ಟವಾಗಿ ಹಲವು ಸಲ ತಿಳಿಸಿದ ಮೇಲೂ ಚಾರ್ಟ್ ಬಿಡುಗಡೆಯಾದ ಮೇಲೆ ರೈಲಿನ ಮಾರ್ಗ ಬದಲಾಯಿಸಿದ್ದು ಟಿಕೇಟ್ ರದ್ದು ಮಾಡಲೂ ಸಾದ್ಯವಾಗದ ಸಮಸ್ಯೆಗೆ ಪ್ರಯಾಣಿಕರನ್ನು ದೂಡಿದೆ. 

ಬಂಟ್ವಾಳ, ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುವ ಈ ರೈಲಿನಲ್ಲಿ ಇಳಿದರೆ ಮಂಗಳೂರು ನಗರಕ್ಕೆ ಇಪ್ಪತ್ತು ಮೂವತ್ತು ನಿಮಿಷದಲ್ಲಿ ತಲುಪ ಬಹುದಾಗಿದ್ದು ಅದೇ ರೈಲು ಪಡೀಲ್ ಮುಖ್ಯ ಮಾರ್ಗ ಬಿಟ್ಚು ಜಂಕ್ಷನ್ ಕಡೆ ಬಂದರೆ ಸುಮಾರು ಒಂದೂವರೆ ಎರಡು ಗಂಟೆಗಳಷ್ಟು ಕಾಲ ಸಮಯ ರೈಲಿನ ನಿದಾನಗತಿಯ ಓಡಾಟ, ಇಂಜಿನ್ ಬದಲಾವಣೆ, ಪ್ಲಾಟ್ ಪಾರಂ ಲಭ್ಯತೆಗಾಗಿ ಕಾಯುವುದರಲ್ಲಿಯೇ ಹಾಳಾಗುತ್ತದೆ.  400 ಕಿಲೋಮೀಟರ್ ಪ್ರಯಾಣ ಮಾಡ ಬೇಕಾದ ಈ ರೈಲಿಗೆ ಇದು ಅನಗತ್ಯ ಸುತ್ತಾಟವಾಗಿದ್ಗು, ಪ್ರಯಾಣಿಕರು ಇಂತಹ ರೈಲುಗಳನ್ನು ಯಾವ ಕಾಲಕ್ಕೂ ಒಪ್ಪುವುದಿಲ್ಲ ಎಂದು ಈಗಗಾಲೇ ಸ್ಪಷ್ಟ ಮಾಡಲಾಗಿದೆ. 

ಬಂಟ್ವಾಳದಿಂದ ಸುರತ್ಕಲ್ ಮದ್ಯೆ ಕೇವಲ 50 ನಿಮಿಷದ ದಾರಿಗೆ ಮೋದಲೇ 2 ಗಂಟೆ ಸಮಯ ಇಡುತಿದ್ದು ಈ ಸಮಯವನ್ನು ಕಡಿತ ಮಾಡಿ 18 ಗಂಟೆಯ ರೈಲು ಪ್ರಯಾಣದ ಅವದಿಯನ್ನು 16 ಗಂಟೆಗೆ ಇಳಿಸುವಂತೆ ಪ್ರಯಾಣಿಕರ ಬೇಡಿಕೆ ಇದೆ.  ಹೀಗಿರುವಾಗ ಅದನ್ನು ಮಾಡದೇ , ಆ ಸಮಯದಲ್ಲಿ ಮಂಗಳೂರಿನ ಎಲ್ಲಾ ಮೂಲೆಗೂ ರೈಲು ಓಡಿಸುವ ಕಾರಣ ಏನು ಎಂಬುದನ್ನು ಇಲಾಖೆ ಸ್ಪಷ್ಟ ಪಡಿಸ ಬೇಕಿದೆ. 

ಬಂಟ್ವಾಳ ಸುರತ್ಕಲ್ ನೇರ ಮಾರ್ಗದಲ್ಲಿ ಐವತ್ತು ಕೋಟಿ ವೆಚ್ಚದ ಜೋಕಟ್ಟೆ ನಿಲ್ದಾಣ ನಿರ್ಮಾಣವಾಗಿ ರಸ್ತೆ ಇಲ್ಲ ಎಂಬ ಬಾಲಿಶ ಕಾರಣಕ್ಕಾಗಿ ಪ್ರಯಾಣಿಕರಿಗೆ ಮುಕ್ತವಾಗಿಲ್ಲ ಮತ್ತು ಕೆಂಜಾರು ಪರಂಗೀಪೇಟೆ ನಿಲ್ದಾಣಗಳ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾಪವಿದೆ. ಹೀಗಿರುವಾಗ ಎಲ್ಲಾ ರೈಲುಗಳೂ ನಗರದ ಒಳಗಡೆ ಬಂದು ಸಮಯ ಹಾಳು ಮಾಡ ಬೇಕು ಎನ್ನುವ ಧೋರಣೆಯ ವಿರುದ್ದ ಉಡುಪಿ ಕಾರವಾರದ ಜನ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಬೇರೆ ಬೇರೆ ದಿಕ್ಕುಗಳ ಎಲ್ಲಾ ರೈಲು ನಿಲ್ದಾಣಗಳಿಂದಲೂ ರೈಲುಗಳು ಬೆಂಗಳೂರಿಗೆ ಬೇಕೆಂದರೆ ಮಂಗಳೂರು ರೈಲು ಸಮಿತಿಗಳು ಪ್ರತ್ಯೇಕ ಬೇಡಿಕೆ ಇಡಲಿ. ಅದನ್ನು ಬಿಟ್ಟು ಉಡುಪಿ ಕಾರವಾರದವರಿಗಾಗಿ 400 ಕಿ.ಮೀ ಓಡ ಬೇಕಾದ ರೈಲುಗಳನ್ನು ಮಂಗಳೂರು ನಗರದೊಳಗೆ ಸುತ್ತಾಡ ಬೇಕು ಎಂಬ ಬೇಡಿಕೆಯನ್ನು ಯಾವ ಕಾರಣಕ್ಕೂ ಒಪ್ಪಲಾಗದು, ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಗಣೇಶ್ ಪುತ್ರನ್ ತಿಳಿಸಿದ್ದಾರೆ.