ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು

ಬೋಳಿಯಾರ್ ಸಮೀಪ ಸೋಮವಾರ ಸಂಜೆ ನಡೆದ ವಾಗ್ವಾದದ ಬಳಿಕ ಪಿಕಪ್ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸರು ಪಿಕಪ್ ಚಾಲಕ ಮಂಗಳೂರಿನ ಹಫಿಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ.

ಮೃತರನ್ನು ಮೊಹಮ್ಮದ್ ಜುನೈದ್ ಮತ್ತು ಆತನ ಸ್ನೇಹಿತ ಮೊಹಮ್ಮದ್ ಅಫ್ರಾಜ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 19ರಂದು ಸಂಜೆ ಸುಮಾರು 4 ಗಂಟೆಗೆ ಜುನೈದ್ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಅಫ್ರಾಜ್ ಹಿಂಬದಿ ಸವಾರನಾಗಿ ವಾಹನದಲ್ಲಿ ಚಲಿಸುತ್ತಿದ್ದ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರು ಹಾಫಿಜ್ ಜತೆ ವಾಗ್ವಾದ ನಡೆಸಿದ್ದರು. ಮತ್ತೊಬ್ಬ ಸ್ನೇಹಿತನ ಮೊಬೈಲ್ ಫೋನ್‌ಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿತ್ತು ಎನ್ನಲಾಗಿದೆ. ಬಳಿಕ ಯುವಕರು ಅಲ್ಲಿಂದ ತೆರಳಿದಾಗ, ಪಿಕಪ್ ಚಾಲಕ ಹಫೀಸ್ ಅವರನ್ನು ಹಿಂಬಾಲಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಪಿಕಪ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದ ಎನ್ನಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

“ಪ್ರಾಥಮಿಕ ವಿಚಾರಣೆ ವೇಳೆ, ವಾಗ್ವಾದದ ಬಳಿಕ ಆಕ್ರೋಶದ ಭರದಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ, ಈ ಹೇಳಿಕೆಯನ್ನು ಸಾಕ್ಷಿಗಳ ಹೇಳಿಕೆಗಳು ಮತ್ತು ಇತರ ಪುರಾವೆಗಳ ಮೂಲಕ ದೃಢಪಡಿಸಬೇಕಿದೆ,” ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.