ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ 

ಜಿಲ್ಲೆಯ ಶಿರಸಿ ತಾಲೂಕಿನ ಕೋಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಜಲ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದರ ಅಡಿಯಲ್ಲಿ ರೂ.  2ಲಕ್ಷ 80ಸಾವಿರ ವೆಚ್ಚದಲ್ಲಿ ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ನೂತನ ಕಾಲುವೆ ಕಾಮಗಾರಿಯು ಇಂದು ಈ ಭಾಗದ ರೈತರ ಪಾಲಿಗೆ ಅಮೃತಧಾರೆಯಾಗಿದೆ. ಮಳೆಯಾಶ್ರಿತ ಬೇಸಾಯ ಹಾಗೂ ಭೌಗೋಳಿಕ ಸವಾಲುಗಳಿಂದ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದ ಕೃಷಿಕರ ಮುಖದಲ್ಲಿ ಈ ಕಾಲುವೆ ಸೃಜನೆ ಹೊಸ ಮಂದಹಾಸ ಮತ್ತು ಆಶಾಕಿರಣವನ್ನು ಮೂಡಿಸಿದೆ. 

ಸೋಣಗಿನಮನೆ ಗ್ರಾಮದ ಸುಮಾರು ಐದಾರು ಕುಟುಂಬಗಳು ವಾಸಿಸುವ ಕುಗ್ರಾಮದಲ್ಲಿ ಮಳೆಗಾಲ ಮುಗಿತೆಂದರೆ ಗದ್ದೆ, ತೋಟಗಳಲ್ಲಿ ನೀರಿನ ಅಭಾವ ಹೆಚ್ಚಾಗಿ ಉಂಟಾಗುತ್ತಿತ್ತು. ಅಲ್ಲದೇ ಇಲ್ಲಿ ಭತ್ತ ಬೆಳೆಯುವ ರೈತರಿಗೆ ನೀರಿನ ಅವಶ್ಯಕತೆ ತೀರಾ ಇತ್ತು. ಹೀಗಾಗಿ ಪರ್ಯಾಯ ಮಾರ್ಗ ಎಂಬoತೆ ಒಂದೂವರೆ ಕಿಲೋಮೀಟರ್ ದೂರದಲ್ಲಿ ಹರಿಯುತ್ತಿದ್ದ ಝರಿಯ ನೀರು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಆದ್ರೆ ನೀರಿನ ಸಂಪರ್ಕ ಸುಲಭವೇನು ಇರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ ಇಲ್ಲಿನ ರೈತರು ವೈಜ್ಞಾನಿಕ ನಕ್ಷೆಯ ಮೂಲಕ ಕಾಲುವೆಗಳನ್ನು ನಿರ್ಮಿಸಿ ಭೇಷ್ ಎನಿಸಿಕೊಂಡಿದ್ದಾರೆ. ಗುಡ್ಡದ ಜಲಮೂಲಗಳಿಂದ ಕೃಷಿ ಗದ್ದೆಗಳಿಗೆ ನೀರು ಸರಾಗವಾಗಿ ತಲುಪುವಂತೆ ಮಾಡಲಾದ ಈ ಕಾಮಗಾರಿ, ಇಡೀ ಗ್ರಾಮದ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. 

ಇನ್ನೂ ಸವಾಲನ್ನೇ ಸುವರ್ಣಾವಕಾಶವಾಗಿಸಿದ ಕಾಮಗಾರಿ ಇದಾಗಿದ್ದು, ಹಿಂದೆ ನೀರಿನ ಕೊರತೆಯಿಂದ ಕೇವಲ ಒಂದು ಬೆಳೆಗೆ ಸೀಮಿತವಾಗಿದ್ದ ರೈತರು, ಈಗ ಕಾಲುವೆ ನೀರನ್ನು ಬಳಸಿಕೊಂಡು ಅಡಿಕೆ ತೋಟದಲ್ಲಿ ತೆಂಗು, ಕರಿಮೆಣಸು ಹಾಗೂ ತರಕಾರಿಗಳನ್ನು ದ್ವಿತೀಯ ಬೆಳೆಯಾಗಿ ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಕಾಲುವೆಗಳಲ್ಲಿ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ಸುತ್ತಲಿನ ಭೂಮಿ ತಂಪಾಗಿರುವOತೆ ಕಾದುಕೊಂಡಿದೆ. 

ಈ ಕಾಲುವೆ ನಿರ್ಮಾಣದಲ್ಲಿ ಇತ್ತ ಕೈಗೆ ಕೂಲಿಯೂ ಸಿಕ್ಕು, ಅತ್ತ ಕೃಷಿ ಭೂಮಿಗೂ ನೀರು ದೊರೆತು ಇಲ್ಲಿನ ರೈತರು ಖುಷಿಯಾಗಿದ್ದಾರೆ. ಜೊತೆಗೆ ಬೆಟ್ಟದ ಇಳಿಜಾರಿನಲ್ಲಿ ನೀರು ರಭಸವಾಗಿ ಹರಿದು ಮಣ್ಣಿನ ಫಲವತ್ತತೆ ಹಾಳಾಗುವುದನ್ನು ಈ ವ್ಯವಸ್ಥಿತ ಕಾಲುವೆಗಳು ತಡೆಗಟ್ಟಿವೆ. 

 ವಿಬಿ-ಜಿ ರಾಮ್ ಜಿ ಯೋಜನೆಯು ಸುಸ್ಥಿರ ಆಸ್ತಿ ಸೃಜನೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಇಲ್ಲಿ ನಿರ್ಮಾಣವಾದ ಕಾಲುವೆ ಕೇವಲ ನೀರನ್ನು ಹರಿಸುತ್ತಿಲ್ಲ, ಬದಲಿಗೆ ಕೃಷಿಕರ ಬಾಳಿನಲ್ಲಿ ಆರ್ಥಿಕ ಸಮೃದ್ಧಿಯ ಬೆಳಕನ್ನು ಹರಿಸುತ್ತಿದೆ. ಈ ಯಶಸ್ವಿ ಕಾಮಗಾರಿ ಇಡೀ ಜಿಲ್ಲೆಗೆ ಮಾದರಿಯಾಗಿದೆ. "ಮಳೆಗಾಲ ಮುಗಿದರೆ ನಮ್ಮ ಗದ್ದೆ ಹಾಗೂ ಅಡಿಕೆ ತೋಟಗಳಿಗೆ ನೀರು ಒದಗಿಸುವುದು ದೊಡ್ಡ ಸವಾಲಾಗಿತ್ತು. ಆದರೆ ಈ ಯೋಜನೆಯಡಿ ಕಾಲುವೆ ನಿರ್ಮಾಣವಾದ ಮೇಲೆ ನಮ್ಮ ತೋಟಗಳಿಗೆ ಜೀವ ಬಂದಿದೆ. ಇನ್ನು ಬೇಸಿಗೆಯಲ್ಲೂ ನಮಗೆ ನೀರಿನ ಚಿಂತೆ ಇಲ್ಲ" ಎನ್ನುತ್ತಾರೆ ಸೋಣಗಿನಮನೆ ಕೃಷಿಕ ಪರಮೇಶ್ವರ್ ಹೆಗಡೆ.