ವಿಶೇಷ ವರದಿ: ಉಡುಪಿ ಜಿಲ್ಲೆಯಲ್ಲಿ 2021ರಿಂದ 2,403 ‘ಡಿಜಿಟಲ್ ಡಾಕ್ಟರ್’ ಪ್ರಮಾಣಪತ್ರ ವಿತರಣೆ 

ಪ್ರಕಾಶ್ ಸಾಮಗ 

ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ 

ಕ್ಲಿನಿಕ್, ಆಸ್ಪತ್ರೆ ಅಥವಾ ವೈದ್ಯರ ಚಿಕಿತ್ಸಾ ಕೊಠಡಿಗೆ ಕಾಲಿಟ್ಟಾಗ, ಆರೋಗ್ಯ ಕ್ಷೇತ್ರದಲ್ಲಿ ಹೊಸದೊಂದು ಡಿಜಿಟಲ್ ಗುರುತು ನಿಧಾನವಾಗಿ ತನ್ನ ಸ್ಥಾನ ಪಡೆದುಕೊಳ್ಳುತ್ತಿದೆ. ಈ ಪ್ರಮಾಣಪತ್ರಗಳ ಹಿಂದೆ ವೈದ್ಯರ ಅರ್ಹತೆಯ ಪರಿಶೀಲನೆ, ಡಿಜಿಟಲ್ ಆರೋಗ್ಯ ದಾಖಲೆಗಳು ಹಾಗೂ ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆಯತ್ತ ಸಾಗುತ್ತಿರುವ ಬದಲಾವಣೆಯೊಂದು ಅಡಗಿದೆ. 

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 2,403 ‘ಡಿಜಿಟಲ್ ಡಾಕ್ಟರ್’ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. 

2021ರಲ್ಲಿ ಮೂರು ಪ್ರಮಾಣಪತ್ರಗಳನ್ನು ನೀಡಲಾಗಿದ್ದರೆ, 2022ರಲ್ಲಿ ಈ ಸಂಖ್ಯೆ 719ಕ್ಕೆ ಏರಿಕೆಯಾಗಿದೆ. 2023ರಲ್ಲಿ ಗರಿಷ್ಠ 960 ಡಿಜಿಟಲ್ ಡಾಕ್ಟರ್ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. 2024ರಲ್ಲಿ 583, 2025ರಲ್ಲಿ 136 ಹಾಗೂ 2026ರಲ್ಲಿ ಎರಡು ಪ್ರಮಾಣಪತ್ರಗಳನ್ನು ನೀಡಲಾಗಿದೆ. 

ಉಡುಪಿ ಜಿಲ್ಲೆಯಲ್ಲಿ ನೋಂದಾಯಿಸಲಾದ ಡಿಜಿಟಲ್ ವೈದ್ಯರ ಪೈಕಿ 1,989 ಮಂದಿ ಖಾಸಗಿ ವಲಯಕ್ಕೆಹಾಗೂ 414 ಮಂದಿ ಸರ್ಕಾರಿ ವಲಯಕ್ಕೆ ಸೇರಿದವರಾಗಿದ್ದಾರೆ. ಜಿಲ್ಲೆಯಲ್ಲಿ ಆಯುರ್ವೇದ ವೈದ್ಯರಿಗೆ ಒಟ್ಟು 698 ಡಿಜಿಟಲ್ ಡಾಕ್ಟರ್ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಉಡುಪಿಯ ಹಿರಿಯ ವೈದ್ಯ ಡಾ. ಚಿದಾನಂದ ಸಂಜು ಅವರು ಕೋಸ್ಟಲ್ ಟಾಕ್ ನ್ಯೂಸ್‌ಗೆ ಮಾತನಾಡಿ, ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದಾದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ರೂಪಿಸುವುದು ABDMನ ಪ್ರಮುಖ ಉದ್ದೇಶವಾಗಿದೆ ಎಂದರು. ಈ ವ್ಯವಸ್ಥೆಯಡಿ ಪ್ರತಿಯೊಬ್ಬರಿಗೂ ವಿಶಿಷ್ಟ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ABHA) ಐಡಿ ನೀಡಲಾಗುತ್ತದೆ. “ರೋಗಿಯ ಒಪ್ಪಿಗೆಯೊಂದಿಗೆ, ದೇಶದ ಯಾವುದೇ ಭಾಗದಲ್ಲಿರುವ ಚಿಕಿತ್ಸೆ ನೀಡುವ ವೈದ್ಯರು ಅಗತ್ಯ ಚಿಕಿತ್ಸೆಗೆ ಸಂಬಂಧಿಸಿದಂತೆ ಆ ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಪ್ರವೇಶಿಸಬಹುದು, ಎಂದು ಅವರು ವಿವರಿಸಿದರು. ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಆರೋಗ್ಯ ಸೇವಾ ಸಂಸ್ಥೆಗಳು ಹಾಗೂ ವೈದ್ಯರು ಡಿಜಿಟಲ್ ಆರೋಗ್ಯ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದರು. 

ಮಣಿಪಾಲದ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಅವರು, ‘ಡಿಜಿಟಲ್ ಡಾಕ್ಟರ್’ ಪ್ರಮಾಣಪತ್ರವು ವೈದ್ಯರ ಶೈಕ್ಷಣಿಕ ಅರ್ಹತೆ ಹಾಗೂ ವೃತ್ತಿಪರ ದಾಖಲೆಗಳನ್ನು ಪರಿಶೀಲಿಸಲು ನೆರವಾಗುವುದರ ಜತೆಗೆ ನಕಲಿ ವೈದ್ಯಕೀಯ ವೃತ್ತಿಯನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಬಹುದು ಎಂದು ತಿಳಿಸಿದರು. ಡಿಜಿಟಲ್ ವ್ಯವಸ್ಥೆಯು ರೋಗಿಗಳ ಆರೋಗ್ಯ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಲು ಸಹ ನೆರವಾಗಲಿದೆ ಎಂದು ಅವರು ಹೇಳಿದರು. 

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಹೆಲ್ತ್ ಪ್ರೊಫೆಷನಲ್ ರಿಜಿಸ್ಟ್ರಿ (HPR) ಯಲ್ಲಿ ನೋಂದಾಯಿಸಿಕೊಂಡಿರುವ ಖಾಸಗಿ ವೈದ್ಯಕೀಯ ವೃತ್ತಿಪರರ ಅರ್ಹತೆಯನ್ನು ಸಂಬಂಧಿತ ರಾಜ್ಯ ವೈದ್ಯಕೀಯ ಮಂಡಳಿಗಳ ಮೂಲಕ ಪರಿಶೀಲಿಸಲಾಗುತ್ತದೆ. ಸರ್ಕಾರಿ ವೈದ್ಯರ ಅರ್ಹತೆಯನ್ನು ರಾಜ್ಯ ಸರ್ಕಾರದ ಸಂಬಂಧಿತ ಪ್ರಾಧಿಕಾರವು ಪರಿಶೀಲಿಸುತ್ತದೆ. ಈ ಪರಿಶೀಲನಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೇ ವೈದ್ಯರಿಗೆ ‘ಡಿಜಿಟಲ್ ಡಾಕ್ಟರ್’ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.