ಸಿಂಗಾಪುರ ಗೃಹ ವ್ಯವಹಾರಗಳ ಸಚಿವ ಕೆ. ಶಣ್ಮುಗಂ ಉಡುಪಿ, ಕೊಲ್ಲೂರಿಗೆ ಭೇಟಿ

ಕೋಸ್ಟಲ್ ಟಾಕ್ ನ್ಯೂಸ್ | ಬೈಂದೂರು

ಸಿಂಗಾಪುರದ ಕಾನೂನು ಮತ್ತು ಗೃಹ ವ್ಯವಹಾರಗಳ ಸಚಿವ ಕೆ. ಶಣ್ಮುಗಂ ಅವರು ಸೆಪ್ಟೆಂಬರ್ 22ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದು, ಪ್ರವಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರವಾಸ ಕಾರ್ಯಕ್ರಮದ ಪ್ರಕಾರ ಸಚಿವರು ಬೆಳಗ್ಗೆ 11.30ಕ್ಕೆ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನ 12.30ಕ್ಕೆ ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ನಿರ್ಗಮಿಸಲಿದ್ದಾರೆ.

ನಂತರ ಮಧ್ಯಾಹ್ನ 2.45ಕ್ಕೆ ಬೈಂದೂರು ಅರೆ ಶಿರೂರು ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಆಗಮಿಸಲಿದೆ. ಬೈಂದೂರಿನಿಂದ ಸಚಿವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ, ಬಳಿಕ ಕೊಲ್ಲೂರು ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಪ್ರವಾಸ ಕಾರ್ಯಕ್ರಮದಂತೆ, ಮರುದಿನ ಸೆಪ್ಟೆಂಬರ್ 23ರಂದು ಪೂಜೆ ಹಾಗೂ ದರ್ಶನದ ಬಳಿಕ ಮಧ್ಯಾಹ್ನ 2 ಗಂಟೆಗೆ ಕೊಲ್ಲೂರಿನಿಂದ ಹೆಲಿಕಾಪ್ಟರ್ ಮೂಲಕ ನಿರ್ಗಮಿಸಿ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ಸಚಿವರ ಭೇಟಿ, ವಾಸ್ತವ್ಯ ಹಾಗೂ ಪ್ರಯಾಣದ ಅವಧಿಯಲ್ಲಿ ಅಗತ್ಯ ಎಸ್ಕಾರ್ಟ್, ವೈಯಕ್ತಿಕ ಭದ್ರತೆ ಮತ್ತು ವಸತಿ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿಗೆ ಸೂಚಿಸಿದೆ. ಸ್ಥಳೀಯ ಪರಿಸ್ಥಿತಿಯನ್ನು ಪರಿಗಣಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಗಿದೆ.