ಕೋಸ್ಟಲ್ ಟಾಕ್ ನ್ಯೂಸ್ | ಮುಲ್ಕಿ

ಮುಲ್ಕಿ ಸಮೀಪದ ಕೊಲ್ನಾಡು ಬಳಿ ಪ್ರವಾಸಿ ಮಿನಿ ಬಸ್ ಶಾಲಾ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್ ಚಾಲಕ ಮತ್ತು ಸ್ಕೂಲ್ ಬಸ್ ನಲ್ಲಿದ್ದ 13 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಅಕ್ಟೋಬರ್ 23ರಂದು ಸಂಜೆ ನಡೆದಿದೆ.

ಸಂಜೆ ಸುಮಾರು 3.40ರ ವೇಳೆಗೆ ಮುಲ್ಕಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಬೆಂಗಳೂರಿನ ಎಸ್‌ಆರ್‌ಎಸ್ ಟೂರಿಸ್ಟ್ ಸಂಸ್ಥೆಗೆ ಸೇರಿದ KA-01-AR-1655 ನೋಂದಣಿ ಸಂಖ್ಯೆಯ ಮಿನಿ ಬಸ್ಸನ್ನು ಚಾಲಕ ದೇವರಾಜ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು, ಕೊಲ್ನಾಡಿನ ಸುಂದರರಾಮ್ ಶೆಟ್ಟಿ ಸಭಾಂಗಣದ ಬಳಿ ನಿಂತಿದ್ದ ರಯಾನ್ ಇಂಟರ್‌ನ್ಯಾಷನಲ್ ಶಾಲೆಯ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಶಾಲಾ ಬಸ್ ಸಮೀಪದ ಚರಂಡಿಗೆ ಬಿದ್ದಿದೆ. ಪರಿಣಾಮ ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳು ಹಾಗೂ ಚಾಲಕ ದೇವದಾಸ್ ಅವರಿಗೆ ಸಾಮಾನ್ಯ ಗಾಯಗಳಾಗಿವೆ. ಗಾಯಾಳುಗಳನ್ನು ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.