ಪ್ರಕಾಶ್ ಸಾಮಗ

ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ

ಭಾರತದ ಬಾಳೆಯ ರಾಜಧಾನಿ ಎಂದೇ ಗುರುತಿಸಲ್ಪಡುವ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ 18 ಮಂದಿ ರೈತರು ಮತ್ತು ಉದ್ಯಮಿಗಳು ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಉಡುಪಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಬಾಳೆ ಮೇಳ ‘ಕದಳೀ ವಿಶ್ವದರ್ಶನ’ದಲ್ಲಿ ಭಾಗವಹಿಸಲಿದ್ದಾರೆ.

ಶ್ರೀ ಸೋದೆ ಮಠದ ಬಾಳೆ ಮುಹೂರ್ತದ ಅಂಗವಾಗಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮೂರು ದಿನಗಳ ಮೇಳ ನಡೆಯಲಿದೆ. ಜಲಗಾಂವ್‌ನಿಂದ ಆಗಮಿಸುವವರು ಪ್ರದರ್ಶನಕ್ಕಾಗಿ ನಾಲ್ಕು ಮಳಿಗೆಗಳನ್ನು ಕಾಯ್ದಿರಿಸಿದ್ದು, ತಮ್ಮ ಬಾಳೆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.

ಬಾಳೆಹಣ್ಣಿನ ನಟ್ ಕ್ರಂಚ್
ಬಾಳೆಹಣ್ಣಿನ ನಟ್ ಕ್ರಂಚ್

ಜಲಗಾಂವ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಳೆ ಬೆಳೆಯಲಾಗುತ್ತಿದ್ದು, ಗ್ರ್ಯಾಂಡ್ ನೈನ್ (ಜಿ9) ಪ್ರಮುಖ ತಳಿಯಾಗಿದೆ. ಆದರೆ ಬೆಳೆಗೆ ಯಾವಾಗಲೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ; ಮಧ್ಯವರ್ತಿಗಳು ಹೆಚ್ಚಿನ ಪಾಲು ಪಡೆಯುತ್ತಿದ್ದಾರೆ ಎಂದು ಅಲ್ಲಿನ ರೈತರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಕೆಲವು ರೈತರು ಬಾಳೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಈಗಾಗಲೇ ತಯಾರಿಸುತ್ತಿದ್ದಾರೆ.

ಮೇಳದಲ್ಲಿ ಭಾಗವಹಿಸುವ ಜಲಗಾಂವ್‌ನ ಅಮೃತಾಯ ಪ್ರಾಸೆಸಿಂಗ್ ಕಂಪೆನಿಯು ತನ್ನ ಇಂಡಿಬನಾ ಬ್ರಾಂಡ್‌ನಡಿ ಬಾಳೆಕಾಯಿ ಹುಡಿಯಿಂದ ತಯಾರಿಸಿದ ಆರು ರೆಡಿ ಮಿಕ್ಸ್‌ಗಳನ್ನು ಪರಿಚಯಿಸುತ್ತಿದೆ. ಇವುಗಳಲ್ಲಿ ದೋಸೆ, ಉಪ್ಪಿಟ್ಟು, ರೋಟಿ ಹಾಗೂ ಗುಜರಾತ್‌ನಲ್ಲಿ ಜನಪ್ರಿಯವಾಗಿರುವ ತೆಪ್ಲಾದ ರೆಡಿ ಮಿಕ್ಸ್‌ಗಳು ಸೇರಿವೆ. ಜಲಗಾಂವ್‌ನ ರೈತ 74 ವರ್ಷ ವಯಸ್ಸಿನ ಹಿರಿಯರಾದ ಅಶೋಕ್ ಗಡೆ ಅವರು ವಿವಿಧ ಬಾಳೆ ಉತ್ಪನ್ನಗಳೊಂದಿಗೆ ಉಡುಪಿಗೆ ಆಗಮಿಸುತ್ತಿದ್ದಾರೆ. ಅವರು 16 ವರ್ಷಗಳಿಂದ ಬಾಳೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಅವರ ಬಾಳೆಹಣ್ಣಿನ ಬಿಸ್ಕೆಟ್‌ಗೆ ಪೇಟೆಂಟ್ ದೊರೆತಿದೆ. ಅವರ ‘ಸಂಕಲ್ಪ ಎಂಟರ್‌ಪ್ರೈಸಸ್’ ಸಂಸ್ಥೆಯ ಇತರ ಉತ್ಪನ್ನಗಳಲ್ಲಿ ಬಾಳೆಹಣ್ಣಿನ ಲಡ್ಡು ಮತ್ತು ಗುಲಾಬ್ ಜಾಮೂನ್ ಸೇರಿವೆ.

ಮಹಾರಾಷ್ಟ್ರ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ)ಯ ನಿವೃತ್ತ ಯೋಜನಾ ನಿರ್ದೇಶಕ ಅನಿಲ್ ವಸಂತರಾವ್ ಭೋಕಾರೆಯವರು ಜಲಗಾಂವ್ ತಂಡದ ನೇತೃತ್ವ ವಹಿಸಲಿದ್ದಾರೆ. ಪಾಲ್‌ನ ಕೃಷಿ ವಿಜ್ಞಾನ ಕೇಂದ್ರದ (ಜಲಗಾಂವ್-1) ಸಸ್ಯ ಸಂರಕ್ಷಣಾ ವಿಷಯ ತಜ್ಞ ಡಾ. ಮಹೇಶ್ ವಿಠ್ಠಲ್ ಮಹಾಜನ್ ಕೂಡ ಭಾಗವಹಿಸಲಿದ್ದಾರೆ.

ನವೆಂಬರ್ 29ರಂದು ಬೆಳಿಗ್ಗೆ 7:45ಕ್ಕೆ ಉಡುಪಿಯ ರಥಬೀದಿಯಲ್ಲಿರುವ ಸೋದೆ ಶ್ರೀ ವಾದಿರಾಜ ಮಠದಲ್ಲಿ ಬಾಳೆ ಮುಹೂರ್ತ ನೆರವೇರಲಿದೆ. ಬೆಳಿಗ್ಗೆ 9:30ಕ್ಕೆ ರಾಷ್ಟ್ರೀಯ ಬಾಳೆ ಮೇಳದ ಉದ್ಘಾಟನೆ ನಡೆಯಲಿದೆ. ಮೇಳವು ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ತೆರೆದಿರಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ.