ಗಣೇಶೋತ್ಸವಕ್ಕೆ ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್;  996 ಸಿಬ್ಬಂದಿ ನಿಯೋಜನೆ

 

ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ

 

ಉಡುಪಿ: ಗಣೇಶ ಚತುರ್ಥಿ–2026ರ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 492 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ನಡೆಯಲಿದ್ದು, ಈ ಪೈಕಿ 415 ಸಾಮಾನ್ಯ, 74 ಸೂಕ್ಷ್ಮ ಹಾಗೂ ಮೂರು ಅತಿಸೂಕ್ಷ್ಮ ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತಿಸಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವ್ಯವಸ್ಥೆ ಕೈಗೊಳ್ಳಲಾಗಿದೆ.

 

ಗಣೇಶ ಮೂರ್ತಿಗಳ ವಿಸರ್ಜನೆ  ಸೆಪ್ಟೆಂಬರ್ 14ರಿಂದ 29ರವರೆಗೆ ವಿವಿಧ ದಿನಗಳಲ್ಲಿ ನಡೆಯಲಿದೆ. ಸೆಪ್ಟೆಂಬರ್ 14ರಂದು ಅತಿ ಹೆಚ್ಚು 211 ಮೂರ್ತಿಗಳ ವಿಸರ್ಜನೆ ನಡೆಯಲಿದ್ದು, ಸೆಪ್ಟೆಂಬರ್ 15ರಂದು 108 ಹಾಗೂ ಸೆಪ್ಟೆಂಬರ್ 16ರಂದು 114 ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸೆಪ್ಟೆಂಬರ್ 17ರಂದು 13, ಸೆಪ್ಟೆಂಬರ್ 18ರಂದು 29, ಸೆಪ್ಟೆಂಬರ್ 19ರಂದು ನಾಲ್ಕು, ಸೆಪ್ಟೆಂಬರ್ 20ರಂದು ಐದು, ಸೆಪ್ಟೆಂಬರ್ 22ರಂದು ಒಂದು, ಸೆಪ್ಟೆಂಬರ್ 23ರಂದು ಒಂದು, ಸೆಪ್ಟೆಂಬರ್ 24ರಂದು ಒಂದು, ಸೆಪ್ಟೆಂಬರ್ 25ರಂದು ಎರಡು, ಸೆಪ್ಟೆಂಬರ್ 26ರಂದು ಒಂದು ಹಾಗೂ ಸೆಪ್ಟೆಂಬರ್ 29ರಂದು ಎರಡು ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಸೆಪ್ಟೆಂಬರ್ 21, 27 ಮತ್ತು 28ರಂದು ಯಾವುದೇ ಮೂರ್ತಿ ವಿಸರ್ಜನೆ ನಿಗದಿಯಾಗಿಲ್ಲ.

 

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ನಿಗದಿತ ಮಾರ್ಗಗಳು ಮತ್ತು ಸ್ಥಳಗಳನ್ನು ಗುರುತಿಸಲಾಗಿದ್ದು, ವಿಸರ್ಜನಾ ಮೆರವಣಿಗೆಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗಣೇಶೋತ್ಸವವು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದೆ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 22 ಶಾಂತಿ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಸಾರ್ವಜನಿಕರು, ಗಣೇಶೋತ್ಸವ ಸಮಿತಿಗಳ ಸದಸ್ಯರು ಹಾಗೂ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

 

 611 ಮಂದಿಯ ವಿರುದ್ಧ ಮುನ್ನೆಚ್ಚರಿಕಾ ಕ್ರಮ

 

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. 2026ನೇ ಸಾಲಿನ ದಾಖಲೆಗಳ ಪ್ರಕಾರ ವಿವಿಧ ಮುನ್ನೆಚ್ಚರಿಕಾ ಕ್ರಮಗಳಡಿ  611 ಮಂದಿಯ ವಿರುದ್ಧ ಕ್ರಮ ಜರುಗಿಸಲಾಗಿದ್ದು, 487 ಮಂದಿಯನ್ನು ಬಾಂಡ್ ಓವರ್ ಮಾಡಲಾಗಿದೆ. ಗಣೇಶೋತ್ಸವದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣಕ್ಕಾಗಿ ಒಟ್ಟು 996 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬಂದೋಬಸ್ತ್‌ಗೆ  3 ಎಎಸ್‌ಪಿ/ಡಿಎಸ್‌ಪಿ, 7 ಸಿಪಿಐ, 37 ಪಿಎಸ್‌ಐ, 83 ಎಎಸ್‌ಐ, 680 ಹೆಡ್ ಕಾನ್‌ಸ್ಟೆಬಲ್/ಪೊಲೀಸ್ ಕಾನ್‌ಸ್ಟೆಬಲ್/ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್, 20 ಡಿಎಆರ್ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿಗಳು ಹಾಗೂ 163 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ 12 ಪಿಎ ಸಿಸ್ಟಂಗಳು ಮತ್ತು ಮೂರು ಡ್ರೋನ್‌ಗಳ ಮೂಲಕ ನಿಗಾ ವ್ಯವಸ್ಥೆ ಮಾಡಲಾಗಿದೆ.

 

ಪೊಲೀಸರ ಮನವಿ

 

ಗಣೇಶೋತ್ಸವ ಮತ್ತು ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ಆಚರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳಿಗೆ ಮನವಿ ಮಾಡಿದೆ. ನಿಗದಿಪಡಿಸಿರುವ ಸ್ಥಳ ಮತ್ತು ಮಾರ್ಗಗಳಲ್ಲಿಯೇ ಗಣೇಶ ಮೂರ್ತಿಗಳ ವಿಸರ್ಜನೆ ನಡೆಸಬೇಕು. ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು. ಮೆರವಣಿಗೆಯ ಸಂದರ್ಭದಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಸಹಕರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಪ್ರಚೋದನಕಾರಿ ಘೋಷಣೆಗಳು, ಅಹಿತಕರ ಘಟನೆಗಳು ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ, ಜಿಲ್ಲೆಯ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.