ಇಂದ್ರಾಳಿಯಲ್ಲಿ ಫುಟ್ ಓವರ್‌ಬ್ರಿಡ್ಜ್ ನಿರ್ಮಾಣ ಇನ್ನೂ ಇಲ್ಲ.; PPP ಮಾದರಿ ಯೋಜನೆ ನೆನೆಗುದಿಗೆ

ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ

ಇಂದ್ರಾಳಿಯಲ್ಲಿ ನೂತನ ರೈಲ್ವೆ ಮೇಲ್ಸೇತುವೆ (ROB) ಉದ್ಘಾಟನೆಯಾಗಿ ಒಂದು ವರ್ಷ ಸಮೀಪಿಸುತ್ತಿದ್ದರೂ, ರಾಷ್ಟ್ರೀಯ ಹೆದ್ದಾರಿ 169A ದಾಟಲು ಪಾದಚಾರಿಗಳಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸುವ ಉದ್ದೇಶದ ಫುಟ್ ಓವರ್‌ಬ್ರಿಡ್ಜ್ (FOB) ನಿರ್ಮಾಣ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ

ಉಡುಪಿ ನಗರಸಭೆ (CMC) ವತಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಫುಟ್ ಓವರ್‌ಬ್ರಿಡ್ಜ್ ನಿರ್ಮಿಸುವ ಯೋಜನೆ ರೂಪಿಸುವ ಚಿಂತನೆ ಕಳೆದ ವರ್ಷ ನಡೆದಿತ್ತು.

ಇಂದ್ರಾಳಿ ರೈಲ್ವೆ ಮೇಲ್ಸೇತುವೆಯನ್ನು 2025ರ ಸೆಪ್ಟೆಂಬರ್ 21ರಂದು ಉದ್ಘಾಟಿಸಲಾಗಿತ್ತು. ಆದರೆ ಮೇಲ್ಸೇತುವೆ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 169Aಯನ್ನು ದಾಟಲು ಪಾದಚಾರಿಗಳಿಗೆ ಪ್ರಸ್ತುತ ಯಾವುದೇ ಸುರಕ್ಷಿತ ವ್ಯವಸ್ಥೆ ಇಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ನಿತ್ಯ ಸಂಚರಿಸುವವರು ರಸ್ತೆ ದಾಟಲು ಅಪಾಯ ಎದುರಿಸುವಂತಾಗಿದೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ವಾಹನ ದಟ್ಟಣೆಯ ಸಂದರ್ಭದಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ.

ಫುಟ್ ಓವರ್‌ಬ್ರಿಡ್ಜ್ ಯೋಜನೆ ಕುರಿತು ಚರ್ಚೆಗಳು ನಡೆದಿವೆ ಎಂದು ಉಡುಪಿ ನಗರಸಭೆಯ ಮೂಲಗಳು ಕೋಸ್ಟಲ್ ಟಾಕ್ ನ್ಯೂಸ್‌ಗೆ ತಿಳಿಸಿವೆ. “ಇದು ಅತ್ಯಂತ ಅಗತ್ಯವಾಗಿರುವುದರಿಂದ ಯೋಜನೆಯನ್ನು ಹೇಗೆ ಮುಂದುವರಿಸಬೇಕು ಎಂಬ ಕುರಿತು ಚರ್ಚೆ ಈ ಹಿಂದೆ ನಡೆದಿತ್ತು. ಸಂಬಂಧಪಟ್ಟ ಸಿಬ್ಬಂದಿಗಳು ಈ ಕುರಿತು ಕಾರ್ಯನಿರ್ವಹಿಸುತ್ತಿದ್ದಾರೆ. ನಗರಸಭೆ ಆಯುಕ್ತರು ಶೀಘ್ರದಲ್ಲೇ ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ನಗರಸಭೆಯ ಸಭೆಯ ಮುಂದೆ ಮಂಡಿಸಲಿದ್ದಾರೆ” ಎಂದು ಮೂಲಗಳು ತಿಳಿಸಿವೆ.

NH ವಿಭಾಗದಿಂದ FOB ನಿರ್ಮಾಣದ ಯೋಜನೆ ಇಲ್ಲ

ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ (PWD) ರಾಷ್ಟ್ರೀಯ ಹೆದ್ದಾರಿ ವಿಭಾಗವು ಸದ್ಯ ಇಂದ್ರಾಳಿಯಲ್ಲಿ ಫುಟ್ ಓವರ್‌ಬ್ರಿಡ್ಜ್ ನಿರ್ಮಿಸುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸುರಕ್ಷಿತ ಪಾದಚಾರಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆಯೇ ಯೋಜನೆಯನ್ನು ರೂಪಿಸಿ, ಅದರ ಅನುಷ್ಠಾನಕ್ಕೆ ಮುಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭೆಯ ಹಣಕಾಸಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ PPP ಮಾದರಿಯನ್ನು ಪರಿಗಣಿಸಲಾಗುತ್ತಿದೆ.

ಪೂರಕ ಡಿಪಿಆರ್‌ಗೆ ಸೂಚನೆ

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ನೂತನ ರೈಲ್ವೆ ಮೇಲ್ಸೇತುವೆಯ ಸುತ್ತಮುತ್ತಲಿನ ಬಾಕಿ ಕಾಮಗಾರಿಗಳ ಕುರಿತು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ವಿಭಾಗದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

“ಅಪ್ರೋಚ್ ರಸ್ತೆ ಸೇರಿದಂತೆ ಇತರ ಸಂಬಂಧಿತ ಕಾಮಗಾರಿಗಳಿಗಾಗಿ ಪೂರಕ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಸೂಚಿಸಲಾಗಿದೆ. ಫುಟ್ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಉಡುಪಿ ನಗರಸಭೆ ಯೋಜನೆ ರೂಪಿಸಬಹುದು” ಎಂದು ಅವರು ತಿಳಿಸಿದ್ದಾರೆ.

ನಗರಸಭೆ ಆಯುಕ್ತರ ಪ್ರಸ್ತಾವನೆ ನಗರಸಭೆಯ ಸಾಮಾನ್ಯ ಸಭೆಯ ಮುಂದೆ ಮಂಡನೆಯಾದ ಬಳಿಕ, ಖಾಸಗಿ ಸಂಸ್ಥೆಗಳಿಂದ ಎಕ್ಸ್ಪ್ರೆಶನ್ ಆಫ್ ಇಂಟರೆಸ್ಟ್ (EOI) ಆಹ್ವಾನಿಸುವ ಸಾಧ್ಯತೆಯಿದೆ. ಹೆದ್ದಾರಿ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ FOB ವಿನ್ಯಾಸ ರೂಪಿಸುವ ಬಗ್ಗೆಯೂ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದ್ರಾಳಿಯಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಸಂಪರ್ಕ ಕಲ್ಪಿಸುವುದು FOB ನಿರ್ಮಾಣದ ಪ್ರಮುಖ ಉದ್ದೇಶವಾಗಿದ್ದು, ಇದೇ ವೇಳೆ ಅಪ್ರೋಚ್ ರಸ್ತೆ ಸೇರಿದಂತೆ ಸ್ಥಳದಲ್ಲಿನ ಇತರ ಬಾಕಿ ಕಾಮಗಾರಿಗಳನ್ನೂ ಪೂರ್ಣಗೊಳಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.