ಮಣಿಪಾಲದಲ್ಲಿ 30 ಗ್ರಾಂ ಎಂಡಿಎಂಎ ವಶ; ಇಬ್ಬರ ಬಂಧನ

 

ರೂ. 1 ಲಕ್ಷ ಮೌಲ್ಯದ ಮಾದಕ ವಸ್ತು ವಶ

 

ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ

 

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ಬ್ರಿಡ್ಜ್‌ ಬಳಿ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಇಟ್ಟುಕೊಂಡು ಸಾಗಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಿ, ಸುಮಾರು ರೂ. 1 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

ಸೆಪ್ಟೆಂಬರ್ 16ರಂದು ಸಂಜೆ 7 ಗಂಟೆ ಸುಮಾರಿಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರಿಗೆ ದೊರೆತ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರಿನಿಂದ ಎಂಡಿಎಂಎ ತಂದು ಉಡುಪಿ, ಪೆರಂಪಳ್ಳಿ ಹಾಗೂ ಮಣಿಪಾಲ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

 

ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ದಾಳಿ ನಡೆಸಲು ಅಧಿಕಾರ ಪತ್ರ ಪಡೆದುಕೊಂಡ ಪೊಲೀಸರು, ಸೆಪ್ಟೆಂಬರ್ 17ರಂದು ರಾತ್ರಿ 12.10ರ ಸುಮಾರಿಗೆ ಅಂಬಾಗಿಲು ಕಡೆಯಿಂದ ಬಂದ KA-19-MK-2021 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರನ್ನು ಪೆರಂಪಳ್ಳಿ ಬ್ರಿಡ್ಜ್‌ ಬಳಿ ತಡೆದು ಪರಿಶೀಲಿಸಿದ್ದಾರೆ.

 

ಕಾರಿನಲ್ಲಿದ್ದ ಕಟಪಾಡಿ ಸಮೀಪದ ಕೋಟೆ ನಿವಾಸಿ ಅಕ್ಬರ್ ಮಹಮ್ಮದ್ ಬ್ಯಾರಿ (44), ಹಾಗೂ ಬೆಂಗಳೂರಿನ ನಿವಾಸಿ ಸೈಯದ್ ಸುಹೇಲ್ (26), ಎಂಬುವರನ್ನು ಬಂಧಿಸಲಾಗಿದೆ.

 

ಆರೋಪಿತರ ಕಾರಿನಿಂದ ಸುಮಾರು 30 ಗ್ರಾಂ ತೂಕದ, ಅಂದಾಜು ರೂ.1 ಲಕ್ಷ ಮೌಲ್ಯದ ಎಂಡಿಎಂಎ, ರೂ.40,000 ಮೌಲ್ಯದ ನಾಲ್ಕು ಮೊಬೈಲ್‌ಗಳು, ರೂ.5,000 ಮೌಲ್ಯದ ಒಂದು ಡಾಂಗಲ್ ಹಾಗೂ ರೂ.9,500 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸುಮಾರು ರೂ.3 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಮತ್ತು 22(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪೊಲೀಸ್ ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ್ ಶೆಟ್ಟಿಗಾರ್, ರಾಜೇಶ್ ಹೆರ್ಗ, ವಿಶ್ವಜಿತ್, ಸುಕುಮಾರ್ ಶೆಟ್ಟಿ, ವಿದ್ಯಾ ನಾಯಕ್, ದೀಕ್ಷಿತ್, ಉಮೇಶ್, ಲಕ್ಷ್ಮೀಶ ಹಾಗೂ ಸಲೀಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

ಮಣಿಪಾಲ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ತನಿಖೆ ಕೈಗೊಂಡಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.