ರೂ.1,205.99 ಕೋಟಿ ಬಿಲ್ ಬಾಕಿ: ಉಡುಪಿ ಗುತ್ತಿಗೆದಾರರ ಸಂಕಷ್ಟ; ಬಾಕಿ ಮೊತ್ತ ಬಿಡುಗಡೆಗೆ ಆಗ್ರಹ

ಕೋಸ್ಟಲ್ ಟಾಕ್ ನ್ಯೂಸ್ | ಕುಂದಾಪುರ

ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮಗಳ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ 1,205.99 ಕೋಟಿ ಬಿಲ್‌ಗಳು ಪಾವತಿಯಾಗದೆ ಬಾಕಿ ಉಳಿದಿವೆ. ಇದರಿಂದ ಅಭಿವೃದ್ಧಿ ಕಾರ್ಯಗಳು, ಅರ್ಥಿಕ ಚಟುವಟಿಕೆ ಸ್ಥಗಿತವಾಗಿದೆ.‌ಬಾಕಿ ಮೊತ್ತ ಬಿಡುಗಡೆಯಾದಲ್ಲಿ ಹೊಸ ಕಾರ್ಮಿಗಾರಿಗಳನ್ನು ನಿರ್ವಹಿಸಲು ಅನುಕೂಲವಾಗಲಿದ್ದು, ಗುತ್ತಿಗೆದಾರರು, ಕಾರ್ಮಿಕರು, ಸಾಮಗ್ರಿ ಪೂರೈಕೆದಾರರು, ಯಂತ್ರೋಪಕರಣಗಳ ಮಾಲೀಕರ ಸಮಸ್ಯೆಗೆ ಪರಿಹಾರ ಸಿಗಲಿದೆ.  ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ.  ಉಡುಪಿ ಜಿಲ್ಲೆಯ ಅರ್ಥಿಕ ವ್ಯವಸ್ಥೆ ಬೆಳವಣಿಗೆಗೆ ಅಭಿವೃದ್ಧಿ ಯೋಜನೆಗಳಿಗೆ ಮರುಚಾಲನೆ ಅಗತ್ಯ ಎಂದು ಉಡುಪಿ ಜಿಲ್ಲಾ  ಗುತ್ತಿಗೆದಾರರ ಸಂಘ ಮುಖ್ಯ ಮಂತ್ರಿಗಳಿಗೆ ಹೆಬ್ರಿಯಲ್ಲಿ ಮುಖ್ಯ ಮಂತ್ರಿ ಡಿ.ಕೆ.ಶಿವ ಕುಮಾರ್ ಅವರಿಗೆ ಮನವಿ ಮಾಡಿತು.

 

ಇದಕ್ಕೂ ಮುನ್ನ ಗುತ್ತಿಗೆದಾರರ ಸಂಘದ ಪ್ರಮುಖರು ಬ್ರಹ್ಮಾವರದದಲ್ಲಿ ಸುದ್ದಿಗೋಷ್ಠಿ ನಡೆಸಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಉಪ್ಪುಂದ ಗೋಕುಲದಾಸ್ ಶೆಟ್ಟಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 189.86 ಕೋಟಿ, ವಾರಾಹಿ ಯೋಜನಾ ವಿಭಾಗ 322.42 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ Rs 4.92 ಕೋಟಿ, ಸಣ್ಣ ನೀರಾವರಿ Rs 618.85 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ 21.88 ಕೋಟಿ, ಬಂದರು ಮತ್ತು ಮೀನುಗಾರಿಕೆ 43.01 ಕೋಟಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ 1,205.99 ಬಿಲ್‌ಗಳು ಬಾಕಿಯಿವೆ. ಇದರಿಂದ  ಬ್ಯಾಂಕ್ ಸಾಲದ ಬಡ್ಡಿ, ಇಎಂಐ, ಕಾರ್ಮಿಕರ ವೇತನ ಹಾಗೂ ಸಾಮಗ್ರಿ ಪೂರೈಕೆದಾರರ ಹಣ ಪಾವತಿಸಲು ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ತೊಂದರೆಯಾಗಿದೆ. ವಿಪರ್ಯಾಸವೆಂದರೆ ಬೇರೆ ಜಿಲ್ಲೆಗಳ ಗುತ್ತಿಗೆದಾರರಿಗೆ ಒಂದಷ್ಟು ಬಿಲ್ ಗಳು ಪಾವತಿಯಾಗುತ್ತಿದೆ ಆದರೆ ಉಡುಪಿಯವರಿಗೆ ಮಾತ್ರ ಯಾವುದೇ ಬಿಲ್ ಪಾವತಿಯಾಗುತ್ತಿಲ್ಲ ಈ ರೀತಿ ತಾರತಮ್ಯ ಧೋರಣೆ ಸರಿಯಲ್ಲ ಎಂದರು.