'ಆಯುಷ್ಮಾನ್ ಭಾರತ್' ಫಲಾನುಭವಿ ತೇಜಾವತಿ ಮನೆಯಲ್ಲಿ 'ಸೇವಾ ಸಂಕಲ್ಪ ಅಭಿಯಾನ'ದ 'ಆಶೀರ್ವಾದದ ದೀಪ' ಪ್ರಜ್ವಲನ

 

ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ

 

ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆಗೆ ಸಾರ್ಥಕ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅವರ 76ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ನಡೆಯುತ್ತಿರುವ "ಸೇವಾ ಸಂಕಲ್ಪ ಅಭಿಯಾನ"ದ 'ಆಶೀರ್ವಾದದ ದೀಪ' ಕಾರ್ಯಕ್ರಮವು ಉಡುಪಿ ವಿಧಾನಸಭಾ ಕ್ಷೇತ್ರದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂದುಬೆಟ್ಟು ನಿವಾಸಿ, 'ಆಯುಷ್ಮಾನ್ ಭಾರತ್' ಯೋಜನೆಯ ಫಲಾನುಭವಿ ತೇಜಾವತಿ ಅವರ ನಿವಾಸದಲ್ಲಿ ನಡೆಯಿತು.

 

ತೇಜಾವತಿ ಅವರು ತನ್ನ ಮನದಾಳದ ಮಾತುಗಳನ್ನಾಡಿ, ಕಳೆದ ಸುಮಾರು 23 ವರ್ಷಗಳಿಂದ 'ಆಮ ವಾತ' ಕಾಯಿಲೆಯಿಂದ ಬಳಲುತ್ತಾ ನಡೆಯಲಾಗದ ಸ್ಥಿತಿಯಲ್ಲಿದ್ದ ತನಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 'ಆಯುಷ್ಮಾನ್ ಭಾರತ್' ಯೋಜನೆಯಡಿ ಸುಮಾರು ಮೂರೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮೊಣಕಾಲಿನ ಶಸ್ತ್ರ ಚಿಕಿತ್ಸೆ ನಡೆಸಿದ ಪರಿಣಾಮವಾಗಿ ಪ್ರಸಕ್ತ ನಡೆದಾಡಲು ಹಾಗೂ ನಿತ್ಯ  ಕರ್ಮ ನಿರ್ವಹಿಸಲು ಶಕ್ತಳಾಗಿದ್ದೇನೆ ಎಂದರು. ಭರವಸೆ ಕಳೆದುಕೊಂಡಿದ್ದ ತನ್ನ ಬದುಕಿಗೆ ಆಶಾ ಕಿರಣವಾಗಿ ಮೂಡಿ ಬಂದು ಆತ್ಮವಿಶ್ವಾಸ ತುಂಬಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಗವಂತನು ದೀರ್ಘಾಯುಷ್ಯ, ಅರೋಗ್ಯ ಭಾಗ್ಯ ಮತ್ತು ಶ್ರೇಯಸ್ಸನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿ 'ಆಶೀರ್ವಾದದ ದೀಪ'ವನ್ನು ಬೆಳಗಿಸಿದರು.

 

'ಆಶೀರ್ವಾದ ದೀಪ' ಜಿಲ್ಲಾ ಮಟ್ಟದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಮಾತನಾಡಿ, ಸದಾ ಜನಹಿತವನ್ನು ಬಯಸುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ರೂಪಿಸಿದ ಅನೇಕ ಜನಪರ ಯೋಜನೆಗಳ ಸಾವಿರಾರು ಫಲಾನುಭವಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಜಿಲ್ಲೆಯಾದ್ಯಂತ ತಮ್ಮ ಮನೆಗಳಲ್ಲಿ 'ಆಶೀರ್ವಾದದ ದೀಪ'ವನ್ನು ಬೆಳಗಿಸುವ ಮೂಲಕ ಮೋದಿ ಅವರ ದೀರ್ಘಾಯುಷ್ಯ, ಅರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ. ಈ ಭಾವನಾತ್ಮಕ ಕ್ಷಣಗಳು ದೇಶವನ್ನು 'ವಿಕಸಿತ ಭಾರತ', 'ವಿಶ್ವಗುರು ಭಾರತ'ದತ್ತ ಮುನ್ನಡೆಸಲು ನಾಂದಿ ಹಾಡಿದೆ. ಎಲ್ಲರ ಸಂಘಟಿತ ಪರಿಶ್ರಮದ ಮೂಲಕ ಮುಂದಿನ 1 ತಿಂಗಳ ಕಾಲ ನಡೆಯುವ 'ಸೇವಾ ಸಂಕಲ್ಪ ಅಭಿಯಾನ'ದ ಎಲ್ಲಾ 13 ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಯಶಸ್ವಿಗೊಳಿಸೋಣ ಎಂದರು.

 

ಪ್ರಧಾನಿ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಸ್ಥಳೀಯ ಹಿರಿಯ ಕೃಷಿಕರಾದ ಕಮಲ ಪೂಜಾರ್ತಿ, ಕೃಷ್ಣಪ್ಪ ಬೆಲ್ಚಡ ಮತ್ತು ಸಿ.ಆರ್.ಪಿ.ಎಫ್. ತರಬೇತಿ ಪಡೆದು ದೇಶ ಸೇವೆಗೆ ಸಜ್ಜಾಗಿರುವ ಯೋಧ ಕೃಷ್ಣ ಪಂದುಬೆಟ್ಟು ಅವರನ್ನು ಸನ್ಮಾನಿಸಲಾಯಿತು.