ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ
ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತದ (ಎನ್ ಪಿಸಿಐಎಲ್) ಆರನೇ ಪರಮಾಣು ಕೇಂದ್ರವಾದ ಕೈಗಾದಲ್ಲಿ ಒಟ್ಟು 2280 MWe ಸಾಮರ್ಥ್ಯದ ಆರು ಒತ್ತಡದ ಭಾರೀ ನೀರಿನ ರಿಯಾಕ್ಟರ್ ಘಟಕಗಳಿವೆ. ಇವುಗಳಲ್ಲಿ ನಾಲ್ಕು ಘಟಕಗಳು (ಕೆಜಿಎಸ್-1 ರಿಂದ 4, 4 x 220 MWe) ಕಾರ್ಯಾಚರಣೆಯಲ್ಲಿದ್ದು, ತಲಾ 700 MWe ಸಾಮರ್ಥ್ಯದ ಇತರ ಎರಡು ಘಟಕಗಳ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿವೆ.
ಕಾರ್ಯಾಚರಣೆಯಲ್ಲಿರುವ ಘಟಕಗಳು ತಮ್ಮ ನಿಗದಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಬಹುದಾದ ಮಾನದಂಡಗಳನ್ನು ಸ್ಥಾಪಿಸಿವೆ.
ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯಿAದ (ಎಇಆರ್ ಬಿ) ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದ ನಂತರ, ಎನ್-ಮಾಸ್ ಕೂಲಂಟ್ ಚಾನೆಲ್ ಬದಲಾವಣೆ (ಇಎಂಸಿಸಿಆರ್) ಮತ್ತು ಎನ್-ಮಾಸ್ ಫೀಡರ್ ಬದಲಾವಣೆ (ಇಎಂಎಫ್ ಆರ್) ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಕೆಜಿಎಸ್-1 ಘಟಕವು ನವೆಂಬರ್ 22 ರಂದು ಬೆಳಿಗ್ಗೆ 01:45 ಗಂಟೆಗೆ ಕ್ರಿಟಿಕಾಲಿಟಿಯನ್ನು ಸಾಧಿಸಿತು. ಕ್ರಿಟಿಕಾಲಿಟಿ ಎಂದರೆ ಸ್ವಯಂ-ಸುಸ್ಥಿರ ಸರಣಿ ಕ್ರಿಯೆಯ ಪ್ರಾರಂಭವನ್ನು ಸೂಚಿಸುತ್ತದೆ.
ಇಎಂಸಿಸಿಆರ್ ಮತ್ತು ಇಎಂಎಫ್ ಆರ್ ಅವಧಿಯು 600 ದಿನಗಳ ಕಾಲ ನಡೆಯಿತು. ಇದು ಭಾರತೀಯ ಪರಮಾಣು ವಿದ್ಯುತ್ ಕಾರ್ಯಕ್ರಮದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಾಗಿದ್ದು, ರಿಯಾಕ್ಟರ್ ನವೀಕರಣ ಮತ್ತು ಜೀವಿತಾವಧಿ ವಿಸ್ತರಣೆ ಚಟುವಟಿಕೆಗಳಿಗೆ ಹೊಸ ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಿದೆ, ಕೆಜಿಎಸ್ ನ ಘಟಕ-1 ಹಿಂದೆ ನಿರಂತರವಾಗಿ 962 ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಆಗ ಎಲ್ಲಾ ತಂತ್ರಜ್ಞಾನಗಳ ಪರಮಾಣು ವಿದ್ಯುತ್ ರಿಯಾಕ್ಟರ್ ಗಳಲ್ಲಿ ನಿರಂತರ ಕಾರ್ಯಾಚರಣೆಯ ವಿಶ್ವ ದಾಖಲೆಯನ್ನು ಸೃಷ್ಟಿಸಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ.
ಸ್ಥಾಪಿತ ಕಾರ್ಯವಿಧಾನದಂತೆ ಕಡ್ಡಾಯ ಪರೀಕ್ಷೆಗಳು ಪೂರ್ಣಗೊಂಡ ನಂತರ, ಈ ಘಟಕವನ್ನು ದಕ್ಷಿಣ ಗ್ರಿಡ್ ಗೆ ಸಿಂಕ್ರೋನೈಸ್ ಮಾಡಲಾಗುವುದು. ಅದರ ನಂತರ, ಘಟಕದ ವಿದ್ಯುತ್ ಮಟ್ಟವನ್ನು ಕ್ರಮೇಣವಾಗಿ ಅದರ ನಿಗದಿತ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಮತ್ತು ಶುದ್ಧ, ವಿಶ್ವಾಸಾರ್ಹ ಮತ್ತು ಹಸಿರು ವಿದ್ಯುತ್ ಉತ್ಪಾದನೆಯನ್ನು ಮುಂದುವರಿಸಲಾಗುವುದು ಎಂದು ಎನ್.ಪಿ.ಸಿ.ಐ.ಲ್ ಕೈಗಾ ಪ್ರಕಟಣೆ ತಿಳಿಸಿದೆ.