ಕೋಸ್ಟಲ್ ಟಾಕ್ ನ್ಯೂಸ್ |ಕುಂದಾಪುರ

 

ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಕಳವು ಮಾಡಿದ ಆರೋಪದ ಮೇಲೆ ಐವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ಕೊಡಗಿನ ಸೋಮವಾರಪೇಟೆಯ ಭಾಗ್ಯ (39), ತಮಿಳುನಾಡಿನ ತಿರುವಣ್ಣಾಮಲೈನ ಅಶ್ವಿನಿ ಎಲ್. (25) ಮತ್ತು ಕಾಮಾಚಿ (50), ಕೃಷ್ಣಗಿರಿಯ ಆದಮ್ಮಾಳ್ (49) ಹಾಗೂ ಕೊಡಗಿನ ಕುಶಾಲನಗರದ ಎಸ್. ನಾಗರಾಜ್ (48) ಎಂದು ಗುರುತಿಸಲಾಗಿದೆ. ನವೆಂಬರ್ 24ರಂದು ಗೀತಾ ಅವರು ಪತಿಯೊಂದಿಗೆ ಔಷಧ ತರಲೆಂದು ಕುಂದಾಪುರಕ್ಕೆ ತೆರಳುತ್ತಿದ್ದರು. ಕೋಟೇಶ್ವರದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೋಟೇಶ್ವರ ಬೈಪಾಸ್‌ನಲ್ಲಿ ಬಸ್‌ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 

ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿದ ಬಳಿಕ ಮಧ್ಯಾಹ್ನ ಸುಮಾರು 12:30ಕ್ಕೆ ದೇವಸ್ಥಾನದ ಪೌಳಿಯ ಹೊರಭಾಗದಲ್ಲಿ ಊಟದ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಜನಜಂಗುಳಿಯ ನಡುವೆ ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಅಪರಿಚಿತರು ಕಳವು ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸರದ ಅಂದಾಜು ಮೌಲ್ಯ ₹6 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಕುಂದಾಪುರ ಪೊಲೀಸರು ಐವರನ್ನು ಬಂಧಿಸಿ, ಅವರಿಂದ ಕಳವು ಮಾಡಿದ್ದ ಚಿನ್ನದ ಸರ, ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸುಮಾರು ₹3 ಲಕ್ಷ ಮೌಲ್ಯದ ಮಹೀಂದ್ರಾ ಟಿಯುವಿ 300 ಕಾರು ಹಾಗೂ ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.