ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಅಕ್ರಮವಾಗಿ ನೆಲೆಸಿದ್ದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ 10 ಬಾಂಗ್ಲಾದೇಶದ ಪ್ರಜೆಗಳನ್ನು ಗಡಿಪಾರು ಪ್ರಕ್ರಿಯೆಗಾಗಿ ಉಡುಪಿಯಿಂದ ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಪೊಲೀಸ್ ಬೆಂಗಾವಲಿನಲ್ಲಿ ಕರೆದೊಯ್ಯಲಾಗಿದೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ 2024ರ ಅಕ್ಟೋಬರ್ 11ರಂದು ಅನುಮಾನಾಸ್ಪದವಾಗಿ ಕಂಡುಬಂದಿದ್ದ ಇವರನ್ನು ಪೊಲೀಸರು ಪತ್ತೆ ಹಚ್ಚಿದ್ದರು. ವಿಚಾರಣೆ ಬಳಿಕ 10 ಮಂದಿ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು 2025ರ ಡಿಸೆಂಬರ್ 8ರಂದು 10 ಮಂದಿಗೆ ತಲಾ ಎರಡು ವರ್ಷ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿತ್ತು. ಇವರು ಉಡುಪಿ ಜಿಲ್ಲಾ ಕಾರಾಗೃಹ ಹಾಗೂ ಬಳಿಕ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದರು. ಶಿಕ್ಷಾ ಅವಧಿಯು 2026ರ ಅಕ್ಟೋಬರ್ 10ರಂದು ಮುಕ್ತಾಯಗೊಂಡಿತ್ತು.
ಇವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಹಾಗೂ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಾಧಿಕಾರಿ ಆದೇಶ ಹೊರಡಿಸಿದ್ದರು. ಅದರಂತೆ, ಗಡಿಪಾರು ಪ್ರಕ್ರಿಯೆಗಾಗಿ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಗಡಿ ಭದ್ರತಾ ಪಡೆಯ ಕಮಾಂಡೆಂಟ್ ಹಾಗೂ ನೋಡಲ್ ಅಧಿಕಾರಿಯ ಮುಂದೆ ಹಾಜರುಪಡಿಸಲು ಇವರನ್ನು ಕರೆದೊಯ್ಯಲಾಗಿದೆ. ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯ್ಕ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೆಂಗಾವಲಿನಲ್ಲಿ ನವೆಂಬರ್ 23ರಂದು ಉಡುಪಿಯಿಂದ ತೆರಳಿದ್ದು, ಬೆಂಗಳೂರಿನಿಂದ ರೈಲಿನಲ್ಲಿ ಮಾಲ್ಡಾಕ್ಕೆ ಕರೆದೊಯ್ಯಲಾಗುತ್ತಿದೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಗಡಿಪಾರು ಪ್ರಕ್ರಿಯೆ ನಡೆದಿದೆ.